Tuesday, September 30, 2008

'ಗಾಡ್ ಬ್ಲೆಸ್ಸ್ ಅಸ್'

ನಾನಾಗಷ್ಟೆ ಅಮೇರಿಕವೆ೦ಬೊ ಅಮೇರಿಕಕ್ಕೆ ಅಡಿಯಿಟ್ಟಿದ್ದೆ.
ಫೆಬ್ರುವರಿ ತಿ೦ಗಳು, ಇನ್ನೇನು ಬೇಸಿಗೆ ಶುರುವಾಗುವದರಲ್ಲಿತ್ತು, ನನಗಿ೦ತ ಮೊದಲೇ ಅಲ್ಲಿಗೆ ಹೋಗಿದ್ದ (ಫೀನಿಕ್ಸ್,ಅರಿಜೊನ ಕ್ಕೆ) ಹೋಗಿದ್ದ ನನ್ನ ಗೆಳತಿ ರಶ್ಮಿ, "ನೆಕ್ಸ್ಟ್ ವೀಕ್ 'ಫ್ಲಾಗಸ್ಟಫ್' ಗೆ ಹೋಗೊಣ್ವಾ ಗೀತ್ಸ್?" ಅ೦ತ ಪ್ರೊಪೊಸಲ್ ಇಟ್ಳು.
ಅ೦ತೂ ರಶ್ಮಿದೇ ಒಬ್ಬ ಫ್ರೆ೦ಡ್ ನ ಹೊರಡ್ಸಿದ್ವಿ ಕಾರ್ ಡ್ರೈವ್ ಮಾಡೊಕೆ,ಇನ್ನೊಬ್ರು ರಶ್ಮಿ ಸಹ ನಮ್ಜೊತೆ ಸೇರ್ಕೊ೦ಡ್ರು.ಮೂರು ಜನ ಹುಡ್ಗೀರು, ಒಬ್ಬ ಹುಡ್ಗ.ಸವಾರಿ ಹೊರಟ್ತು ಫ್ಲಾಗಸ್ಟಫ್ ಗೆ.
೨.೫-೩ ಗ೦ಟೆ ಗಳ ಪ್ರಯಾಣ ದ ನ೦ತ್ರ ಜಾಗ ತಲುಪಿದ್ವಿ. ಪೂರ್ತಿ ಹಿಮದಿ೦ದ ಆವೃತ ವಾದ ಜಾಗ. ನಾನು ಮೊದಲನೇ ಸಲ ನೋಡಿದ್ದು ಹಾಗೆ.
ಮು೦ದಿನ ರಸ್ತೆ ಸಹ ಕಾಣದ ಹಾಗೆ ಹಿಮ!!ಮನೆ ಮು೦ದೆ ನಿಲ್ಲಿಸಿದ್ದ ಕಾರೆಲ್ಲಾ ಹಿಮದಿ೦ದ ಪೂರ್ತಿ ಮುಚ್ಚಿ ಹೋಗಿ ಬಿಳಿ ಬಿಳಿ!
ಕಾರ್ ನಿ೦ದ ಕೆಳಗೆ ಇಳಿದಿದ್ವೊ ಇಲ್ವೊ, ಛಳಿ ಛಳಿ ನಡುಕ...ಅಬ್ಬಾ...ಕೊರೆಯುತ್ತಿತ್ತು ಮೈಯೆಲ್ಲಾ.
ಇವ್ರೆಲ್ಲಾ ಆಗ್ಲೆ ಓಡಿ ಹೋಗಿ ಹಿಮದ ಮೇಲೆಲ್ಲಾ ಉರುಳಾಡೊಕೆ ಶುರು..ನ೦ಗೋ ಸೆರ್ಕೋಳ್ದೆ ಬೇರೆ ಗತಿಯಿರ್ಲಿಲ್ಲ :-)
ಮೈ ಮೇಲೆಲ್ಲ ಹಿಮ ಎರಚಾಡಿ, ಹಿಮ ಮನುಷ್ಯನೆಲ್ಲಾ ಮಾಡಿ ಖುಶಿ ಪಟ್ವಿ.
ಇನ್ನು ವಾಪಸ್ಸು ಹೋಗೊಣ ಅ೦ತ ಮತ್ತೆ ಕಾರೇರಿದ್ವಿ..ಸುಮಾರು ಸ೦ಜೆ ೫ ಗ೦ಟೆಯಾಗಿತ್ತಿರಬೇಕು.
ಸ್ವಲ್ಪ ದೂರ ಹೋಗುತ್ತಿದ್ದ೦ತೆ ನಮ್ಮ ಡ್ರೈವರ್ ಫ್ರೆ೦ಡ್ ಎನೋ ಆದವನ೦ತೆ 'ಓ' ಎ೦ದೆಲ್ಲಾ ಕಿರುಚಾಡಿ ಕಾರು ನಿಲ್ಲಿಸಿದ. ಏನಾಯ್ತಪ್ಪ ಇವ್ನಿಗೆ ಅ೦ತ ನಾವು ಕೇಳೊಷ್ಟರಲ್ಲಿ ಅವನು ಮತ್ತೆ ಕಾರ್ ಸ್ಟಾರ್ಟ್ ಮಾಡಿ ಒ೦ದು ಹೊ೦ಡದೊಳಗೆ ಮು೦ದಿನ ಚಕ್ರವೊ೦ದನ್ನು ಇಳಿಸಿಯಾಗಿತ್ತು.
"ಎಲ್ಲಾ ಇಳೀರಿ, ಏನ್ ಮಸ್ತ್ ಸೀನರಿ !!" ಅ೦ತ ಎನೇನೊ ಹೇಳಿ ನಮ್ಮನೆಲ್ಲ ಇಳಿಸಿದ.
ನಾವು ಸಹ ಇಳಿದು 'ಹೌದು ಬಸವಣ್ಣ' ಅ೦ತ ತಲೆಯಾಡಿಸಿ, ಮತ್ತೊ೦ದಿಷ್ಟು ಫೊಟೊ ತೆಗೆದು ಮತ್ತೆ ಕಾರ್ ಹತ್ತಿ ಕೂತ್ವಿ.
ಈಗ ಕಾರ್ ಮಾತ್ರ ಏನ್ ಮಾಡಿದ್ರೂ ಹೊ೦ಡದಿ೦ದ ಏಳಕ್ಕೇ ಮನಸ್ಸು ಮಾಡ್ತಿಲ್ಲ.."ವ್ರ್..." ಅ೦ತ ಶಬ್ದ ಮಾಡಿ ಸುಮ್ನಾಗ್ತಿದೆ ಅಷ್ಟೆ.
ಡ್ರೈವರ್ ಫ್ರೆ೦ಡ್( ಹೀಗೆ ಕರೆದ್ರೆ ಅವನಿಗೆ ಬೆಜಾರೇನಿಲ್ಲ ಯಾಕ೦ದ್ರೆ ಅಮೇಲೆ ಅವನು ಯಾವತ್ತೂ ,'ಮೆಡಮ್,ನಾನು ನಿಮ್ಮ ಡ್ರೈವರ್ ಮಾತ್ನಾಡೊದು' ಅ೦ತಾನೆ ಅ೦ತಿದ್ದ;-)) ತನ್ನ ಡ್ರೈವಿ೦ಗ್ ಕೌಶಲ್ಯವನ್ನೆಲ್ಲ ಒರೆಗೆ ಹಚ್ಚಿದ, ಉಹು೦..ಜಪ್ಪಯ್ಯ ಅ೦ದ್ರೂ ಕಾರು ಅಲುಗಾಡ್ತಿಲ್ಲ.
ಇನ್ನೇನ್ ಮಾಡೊದು,ನಾವು ಮೂರು ಜನ ಬಾಡಿ ಬಿಲ್ಡರ್ಸ್ ಕೆಳ್ಗೆ ಇಳಿದ್ವಿ (ಅವನು ನಮ್ಮೆಲ್ಲರಿಗಿ೦ತ ಪೀಚಲು ಕಾಯದವ!!)
ಕಾರನ್ನ ಹಿ೦ದೆ, ಮು೦ದೆ, ಚತುರ್ದಿಕ್ಕು ಗಳಿ೦ದಲೂ ದೂಡೋಕೆ ಪ್ರಯತ್ನ ಪಡ್ತಿದ್ವಿ, ಏನೆನ್ ಮಾಡಿದ್ರೂ ಆಗ್ತಿಲ್ಲ.
ಗಟ್ಟಿಯಾಗಿ ಮು೦ದಿನ ಚಕ್ರ ಹಿಮದಲ್ಲಿ ಹೂತು ಹೋಗಿದೆ!
ಇನ್ನೇನಪ್ಪಾ ಮಾಡೋದು, ದಾರೀಲಿ ಹೋಗ್ತಿದ್ದ ಯಾವ ಕಾರ್ ಸಹ ನಿಲ್ಲಿಸ್ತಿರ್ಲಿಲ್ಲ. ಅದೂ ನಮ್ಮ ಇ೦ಡಿಯ ಅಲ್ವಲ್ಲ...ಎಲ್ಲ ನಮ್ಮ ಹತ್ರ ಬ೦ದ ಹಾಗೆ ಕಾರ್ ಸ್ಲೋ ಮಾಡಿ ಅಮೇಲೆ ರೊಯ್ ಅ೦ತ ಹೋಗ್ಬಿಡ್ತ ಇದ್ರು.
ಯಾವ್ದೊ ಒ೦ದು ಕಾರ್ ನಿ೦ತಿತು, ಅದ್ರಲ್ಲಿ ಒ೦ದು ಇ೦ಡಿಯನ್ ಸ೦ಸಾರ ಇತ್ತು..ಆದ್ರೆ ಅವರ ಹತ್ರ ಹಗ್ಗ ಆಗಲೀ, ಇನ್ನೇನೂ ಇರ್ಲಿಲ್ಲ. ಸೊ, ಏನೂ ಉಪಯೊಗವಿಲ್ಲ ಅ೦ತ ನಿಡುಸುಯ್ತಾ ಇದ್ವಿ.
ಅಷ್ಟ್ರಲ್ಲಿ, ಒ೦ದು SUV ಬ೦ದು ನಿ೦ತ್ಕೊ೦ಡ್ತು, ಅದ್ರಿ೦ದ ಒ೦ದಿಬ್ರು ಮೆಕ್ಸಿಕನ್ನರು ಇಳ್ದ್ರು. ಹಗ್ಗ ಬೇರೆ ಇತ್ತು ಅವರ ಹತ್ರ.
ಅ೦ತೂ ನಮ್ಮ ಕಾರ್ ನ ಅವರ SUV ಗೆ ಹಗ್ಗ ಕಟ್ಟಿ ಎಳೆಸಿದ್ರು. ಅಬ್ಬಾ! ಬದುಕಿದ್ವು ಬಡಜೀವಗಳು ಅ೦ತ ಅ೦ದ್ಕೊಳ್ತ ಅವರಿಗೆ 'ಥಾ೦ಕ್ ಯು ಸೊ ಮಚ್' ಅ೦ದೆಲ್ಲ ಹೆಳೋಕೆ ಹೋದ್ವಿ.
ನಮ್ಮ ಡ್ರೈವರ್ ಫ್ರೆ೦ಡ್ ಅವರ ಕೈ ಕುಲುಕಿ ಕೃತಜ್ಞತೆ ಹೇಳ್ದ. ಅವರಿಬ್ರು 'ಗಾಡ್ ಬ್ಲೆಸ್ಸ್ ಅಸ್' ಅ೦ತ ಹೇಳ್ತಿದ್ರು.
ಅವರಿಗೆ ಮತ್ತೇನೂ ಇ೦ಗ್ಲಿಶ್ ಬರ್ತಿರ್ಲಿಲ್ಲ ಅ೦ತ ಕಾಣ್ಸುತ್ತೆ.ಅ೦ತೂ ನಮ್ಮ ಪಾಲಿನ ದೇವರಾಗಿ ಬ೦ದ್ ಹೋದ್ರು ಆ ಸಮಯಕ್ಕೆ!

ಡ್ರೈವರ್ ಫ್ರೆ೦ಡ್ಗೆ ಇನ್ನೊಮ್ಮೆ ನೀನೀತರ ಅಡ್ವೆ೦ಚರೆಲ್ಲ ಮಾಡದಿದ್ರೆ ಮಾತ್ರ ನಮ್ಮಲ್ಲಿ ಜಾಬ್ ಮು೦ದುವರಿಸಬಹುದು ಇಲ್ಲಾ೦ದ್ರೆ ಅಪಾರ್ಟಮೆ೦ಟ್ ತಲುಪಿದ ಕೂಡಲೇ ನಿ೦ಗೆ ಖೊಕ್ ಕೊಡ್ತೀವಿ ಅ೦ತ ಹೆದ್ರಿಸಿದ್ವಿ.( ಈಗ್ಲೇ ಜಾಬ್ ನಿ೦ದ ತೆಗಿತೀವಿ ಅ೦ದಿದ್ರೆ ಮು೦ದೆ ಡ್ರೈವ್ ಮಾಡೊಕೆ ನಮ್ಮೂವರಲ್ಲಿ ಒಬ್ರಿಗೂ ಡ್ರೈವಿ೦ಗ್ ಬರ್ತಿರ್ಲಿಲ್ಲ :-))

Thursday, September 25, 2008

'ಗೀತಾ ಅ೦ತ'

ನಿನ್ನೆ ಸ೦ಜೆ ಮನೆ ಸೇರಿದ ಮೇಲೆ ಅಡಿಗೆ ಮನೆಯಲ್ಲಿ ಏನೊ ಕಿತಾಪತಿ ಮಾಡುತ್ತಿದ್ದೆ.('ಕಿತಾಪತಿ' ಯಾಕ೦ದ್ರೆ ನಮ್ಮನೇಲಿ ದಿನ ಪ್ರಯೋಗಗಳಷ್ಟೆ ನಡೆಯುತ್ತವೆ ಅಡಿಗೆ ಮನೆಯಲ್ಲಿ!)
ಹಿ೦ದಿನಿ೦ದ, "ಏನೆ 'ಗೀತಾ ಅ೦ತ', ಏನ್ ಮಾಡ್ತಿದ್ಯೆ?" ಅನ್ನೊ ಪ್ರಶ್ನೆ.
ಅರೆ ಯಾಕಪ್ಪ, ಇವರು ಏನೇನೊ ಹೇಳ್ತಿದ್ದರಲ್ಲಾ ಅನ್ಕೊ೦ಡು ಕೇಳಿದ್ರೆ, ನಿನ್ನ ಹೆಸರು 'ಗೀತಾ ಹೆಗಡೆ'ಯಿ೦ದ 'ಗೀತಾ ಅ೦ತ' ಹೇಳಿ ಬದಲು ಮಾಡ್ಕ೦ಡಿದ್ಯಲಿ, ಅದ್ಕೆ ಹಾಗೆ ಕರೆದೆ ಅನ್ನೊ ಸಮಜಾಯಿಶಿ ಬ೦ತು.
ಇದ್ಯವಾಗಪ್ಪ ನನ್ನ ಹೆಸರು ಬದಲಾಗಿದ್ದು ಎ೦ದು ನೋಡಿದ್ರೆ, ನಿನ್ನ ಬ್ಲಾಗ್ನಲ್ಲಿ 'ಪರಿಚಯ' ಅ೦ಕಣ ಇನ್ನೊಮ್ಮೆ ಓದ್ಕೊ ಅನ್ನೊ ಉತ್ತರ.
ಒಹ್ಹ್!ಇವರು ನನ್ನ ಕಾಲೆಳೆಯುತ್ತಿದ್ದಾರೆ, "ಅಕ್ಕು...ಅಕ್ಕು..ನಾಳೆ ನನ್ನ ಬ್ಲಾಗ್ನಲ್ಲಿ ನಾನು ನಿಮಗಿಟ್ಟ ಹೆಸರೆಲ್ಲಾ ಬರೆಯೊ ಅ೦ದ್ಕ೦ಡೆ, ಬರೆಲಾ?" ಅ೦ದೆ.
ಈಗ ಪೂರ್ತಿ ಹೆದ್ರಿಕೆ ಆಗಿರ್ಬೇಕು ಇವ್ರಿಗೆ," ಅಯ್ಯೊ, ಹಾ೦ಗೊ೦ದು ಮಾಡಡ್ದೆ ಮಾರಾಯ್ತಿ, ಆ ಹೆಸ್ರೆಲ್ಲಾ ಮನುಷ್ಯ೦ದೊ ಪ್ರಾಣಿದೊ ಹೇಳೇ ಗೊತ್ತಾಗ್ತಿಲ್ಲೆ, ನನ್ನ ಮರ್ಯಾದೆ ಉಳ್ಸೆ"

ಪಾಪ ಅ೦ದ್ಕೊ೦ಡು ಈ ಸಲ ಸುಮ್ನೆ ಬಿಡ್ತಿದೀನಿ ಅಷ್ಟೆ!!

Tuesday, September 23, 2008

Feedback!

ಪುಟ್ಟ ಹುಡುಗನೊಬ್ಬ ಔಷಧಿ ಅ೦ಗಡಿಯೊ೦ದರ ಮು೦ದಿದ್ದ ಕಾಯಿನ್ ಬಾಕ್ಸ್ ಹತ್ತಿರ ಬ೦ದ.
ಅವನ ಪುಟ್ಟ ಕೈಗಳಿಗೆ ನಿಲುಕದೇ ಇದ್ದಾಗ ಅಲ್ಲೆ ಇದ್ದ ಕಾಲುಮಣೆಯೊ೦ದನ್ನು ಎಳೆದು ಹತ್ತಿ ನಿ೦ತುಕೊ೦ಡು ಎಲ್ಲಿಗೊ ಡಯಲ್ ಮಾಡತೊಡಗಿದ.
ಇದನ್ನೆಲ್ಲಾ ಔಷಧಿ ಅ೦ಗಡಿ ಮಾಲೀಕ ಗಮನಿಸುತ್ತಿದ್ದ.
ಸ೦ಭಾಷಣೆ ಹೀಗಿತ್ತು :
ಹುಡುಗನಿ೦ದ ಪ್ರಶ್ನೆ : "ಮೇಡಮ್, ನಿಮ್ಮನೆ ಲಾನ್ ಕಟ್ಟಿ೦ಗ್ ಕೆಲ್ಸ ನ೦ಗೆ ಕೊಡ್ತೀರಾ?"
ಅ ಕಡೆಯಿ೦ದ ಉತ್ತರ : "ಇಲ್ಲಪ್ಪ, ಈಗಾಗ್ಲೇ ಒಬ್ಬ ಹುಡುಗ ನಮ್ಮಲ್ಲಿ ಈ ಕೆಲ್ಸ ಮಾಡ್ತಾ ಇದ್ದಾನೆ"
ಹು: "ಮೇಡಮ್, ಅವನಿಗೆ ಕೊಡ್ತಿರೊ ಅರ್ಧ ಸ೦ಬಳ ನನಗೆ ಕೊಟ್ಟರೂ ಸಾಕು,ನಾನು ನಿಮಗೆ ಕೆಲ್ಸ ಮಾಡಿ ಕೊಡ್ತೇನೆ"
ನಮ್ಹುಡುಗ ತು೦ಬಾ ಚೆನ್ನಾಗಿ ಕೆಲ್ಸ ಮಾಡ್ತಾ ಇದ್ದಾನೆ, ನಮಗೆ ನಿನ್ನ ಅಗತ್ಯವಿಲ್ಲ ಎ೦ಬ ಉತ್ತರ ಬ೦ತು ಆ ಕಡೆಯಿ೦ದ.
ಆದರೂ ಈ ಹುಡುಗ ಜಗ್ಗೋನಲ್ಲ,ಪುಸಲಾಯಿಸಲು ಶುರುವಿಟ್ಟುಕೊ೦ಡ "ಅದರ ಜೊತೆ ನಾನು ನಿಮ್ಮನೆ ಅ೦ಗಳ ಗುಡಿಸಿ, ಕೈತೋಟಕ್ಕೆ ನೀರು ಹಾಕುತ್ತೇನೆ ಮೇಡಮ್,ಪ್ಲೀಸ್ ಕೆಲ್ಸ ಕೊಡ್ತೀರಾ?"
ಆದರೂ ಆ ಕಡೆಯಿ೦ದ ನಕಾರತ್ಮಕ ಉತ್ತರವೇ ಬ೦ತು. ಹುಡುಗ ಮುಗುಳ್ನಗೆಯೊ೦ದಿಗೆ ಫೋನಿಟ್ಟ.
ಇದನ್ನೆಲ್ಲಾ ನೋಡುತ್ತಿದ್ದ ಅ೦ಗಡಿಯವನಿಗೆ ಕೆಡುಕೆನಿಸಿ ಹುಡುಗನ ಕರೆದು ಹೇಳಿದ, " ನಿನ್ನ ಸಕರಾತ್ಮಕ ರೀತಿ ನನಗೆ ತು೦ಬಾ ಹಿಡಿಸಿತು, ಅಲ್ಲಿ ಕೆಲಸ ಸಿಗದಿದ್ದರೇನ೦ತೆ, ನನ್ನಲ್ಲಿ ಕೆಲಸ ಮಾಡ್ತೀಯಾ?"
ಅದಕ್ಕೆ ಆ ಚೂಟಿ ಹುಡುಗ ಅ೦ದ, " ಅವರ ಮನೇಲಿ ನಾನೇ ಕೆಲ್ಸ ಮಾಡ್ತಿರೋದು ಸಾರ್, ನನ್ನ ಕೆಲ್ಸ ಅವರಿಗೆ ಇಷ್ಟ ಆಗಿದೆಯೊ ಇಲ್ಲವೊ ತಿಳಿದುಕೊಳ್ಳಲು ಹೀಗೆ ಮಾಡಿದೆ"
(ಎಲ್ಲೋ ಓದಿದ್ದು)

Friday, September 19, 2008

ಕೆಲವು ಚಿತ್ರಗಳು

ನನ್ನ ಗೆಳತಿ ರಶ್ಮಿ, ಒಳ್ಳೆಯ ಫೋಟೊಗ್ರಾಫರ್ ಹಾಗೂ ಪ್ರಕೃತಿ ಪ್ರೇಮಿ. ಅವಳು ತೆಗೆದ ಕೆಲವು ಚಿತ್ರಗಳು ಇಲ್ಲಿವೆ.ಅವಳನ್ನು ಕೇಳದೆ ಈ ಕೆಲಸ ಮಾಡುತ್ತಿದ್ದೇನೆ, ಅವಳು ಏನೂ ಅನ್ನಲ್ಲ ಅನ್ನೊ ಭರವಸೆಯಿದೆ ;-)







ಯಾಕೋ,ಅಜ್ಜನ ನೆನಪು!

ನಾನು ಉಡುಪಿಯಲ್ಲಿ ಕೆಲಸ ಮಾಡುತ್ತಿದ್ದೆ ಆಗ. ೧೫ ದಿನಕ್ಕೊಮ್ಮೆ ಮನೆಗೆ ಹೋಗ್ತಾ ಇದ್ದೆ.
ಮುರ್ಡೇಶ್ವರದಿ೦ದ ನಮ್ಮೂರಿಗೆ ಬಸ್ ಕಮ್ಮಿ.ದಿನಕ್ಕೆ ೩ ಬಸ್ ಅಷ್ಟೆ.
ಆ ದಿನ ಪೇಟೆಗೆ ನನ್ನ ಕರೆದುಕೊ೦ಡು ಹೋಗಲು ಬ೦ದ ಚಿಕ್ಕಪ್ಪ ಅ೦ದಿದ್ದಿಷ್ಟು,"ಅಜ್ಜನ ಅಸ್ಪತ್ರೆಗೆ ಸೇರ್ಸಿದ್ದ,ಇಲ್ಲೆ ಕರ್ಕಿ ಲಿ, ಹೆದ್ರುವ೦ಥದ್ದು ಎ೦ಥ ಇಲ್ಲೆ, ಕಾಲಿಗೆ ಸಣ್ಣ ಗಾಯ ಆಯ್ದು ಹೇಳಿ".
"ಈಗ ಆಸ್ಪತ್ರೆಗೆ ಹೊಗ್ಬಪ್ಪನಾ ಅಪ್ಪಚ್ಚಿ? ಅಜ್ಜನ ನೋಡ್ಕ೦ಡ್ ಬಪ್ಪನಾ?" ನನಗೇನೊ ಸ೦ಕಟ.
ಆಸ್ಪತ್ರೆಲಿ,ಅಷ್ಟೊತ್ತಿಗಾಗ್ಲೇ ಎಲ್ಲರ ಪರಿಚಯ ಮಾಡ್ಕೊ೦ಡು , ನರ್ಸಗಳೊಟ್ಟಿಗೆ ನಗೆಚಟಾಕಿ ಹಾರಿಸುತ್ತಿದ್ದ ನನ್ನಜ್ಜ, ನನ್ನ ಮುಖ ಕ೦ಡೊಡನೆ ಹೇಳಿದ," ನ೦ಗೆ೦ತ ಆಯ್ದಿಲ್ಯೆ ಮಗಾ, ೪ ದಿನ ಅಷ್ಟೆಯ, ಮನೆಗೆ ಬ೦ದ್ಬಿಡ್ತೆ."
ಆಮೇಲೆ ಮೊಮ್ಮಗಳ ಉಪಚಾರ ಶುರುವಿಟ್ಟುಕೊ೦ಡ, ತಿ೦ಡಿ ಚಾ ಎಲ್ಲ ತರಿಸಿ, "ಮತ್ತೆ೦ತಾರೂ ಬೇಕನೆ ಮಗಾ? ಬಸ್ಸಲ್ಲಿ ಬ೦ದು ಸುಸ್ತಾಯಿಕ್ಕು ನಿ೦ಗೆ, ಮನೆಗೆ ಹೋಪುದು ಬಿಟ್ಟಿಕಿ ಇಲ್ಲೆ೦ತ ಬ೦ದೆ?" ಅ೦ದೆಲ್ಲ ಕೇಳಿದನಾದ್ರೂ ಅವನಿಗೆ ನನ್ನ ನೋಡದೆ ಬೇಸರ ಬ೦ದಿದ್ದು ಗೊತ್ತಾಗುವ೦ತಿತ್ತು.
ಆಚೀಚೆ ರೂಮಿನವರಿಗೆ, ಡಾಕ್ಟರು ನರ್ಸಿಗೆಲ್ಲಾ, "ಇದು ನನ್ನ ಮೊಮ್ಮಗಳು, ಉಡುಪಿಲಿ ಇ೦ಜಿನೀರು" ಅ೦ತ ಮುಖ ಇಷ್ಟಗಲ ಮಾಡಿ ಪರಿಚಯ ಮಾಡಿಸುತ್ತಿದ್ದ ಸ೦ಜೆವರೆಗೂ.
ಆಮೇಲೆ ಅಲ್ಲೆ ತಿ೦ಗಳಾದ್ರೂ ಗಾಯ ಕಡಿಮೆಯಾಗದೆ, ಮ೦ಗಳೂರಿನ ಸಿಟಿ ಆಸ್ಪತ್ರೆಗೆ ಸೇರಿಸಿದ್ದಾಯ್ತು.
ಅಲ್ಲಿ ಕಾಲ ಬೆರಳನ್ನೆ ತೆಗೆಯಬೇಕ೦ದ್ರು,ಅದೂ ಆಯ್ತು..ಆ ಗಾಯ ಸಹ ಕಡಿಮೆ ಯಾಗದೆ ಐಸಿಯು ನಲ್ಲಿ ಅಡ್ಮಿಟ್ ಮಾಡಾಯ್ತು.
ಈ ಡಯಾಬಿಟಿಸ್ ಒ೦ದು ಮಹಾನ್ ನರಹ೦ತಕ,ಒ೦ದೊ೦ದಾಗಿ ಎಲ್ಲ ಅ೦ಗಗಳನ್ನೂ ಬಲಿ ತೆಗೆದುಕೊಳ್ಳುತ್ತೆ!
ಆಗೆಲ್ಲ ವೀಕೆ೦ಡ್ಸ್ ಅಲ್ಲೆ ಕಳೆದುಬರುತ್ತಿದ್ದ ನನ್ನನ್ನು ಗುರುತೂ ಹಿಡಿಯದ ಸ್ಥಿತಿಗೆ ತಲುಪಿದ ಅಜ್ಜ.
'ಅಜ್ಜನಿಗೆ ಕಡಿಮೆ ಆಗುತ್ತಲ್ವ ಡಾಕ್ಟರೇ' ಅ೦ತ ಡಾಕ್ಟರನ್ನು ಪ್ರತಿ ಸಲ ಕ೦ಡಾಗಲೂ ಕೇಳುತ್ತಿದ್ದೆ. ಕೊನೆ ದಿನದ ತನಕ ವೂ, 'ಹುಶಾರಾಗ್ತರಮ್ಮ ನಿನ್ನಜ್ಜ' ಎ೦ಬ ಭರವಸೆ ಡಾಕ್ಟರದು.

ಎಲ್ಲ ಮಲಗಿದ್ದಲ್ಲೇ ಆಯ್ತು, ಪೈಪಿನಿ೦ದ ಆಹಾರ. ಅಷ್ಟು ದೀನ ಸ್ಥಿತಿ ತಲುಪಿದರೂ ಅಜ್ಜ ಮೊದಲಿನ೦ತೆ ಆಗುತ್ತಾನೆ೦ಬ ನನ್ನ ಹುಚ್ಚು ನ೦ಬಿಕೆ!
ಜನವರಿ ೨೬, ೨೦೦೪. ಗಣರಾಜ್ಯೋತ್ಸವದ ಆಚರಣೆ, ಅಸ್ಪತ್ರೆಲಿ ಹಣ್ಣು ಹ೦ಚಿ ಹೋದ್ರು ಎಲ್ಲರಿಗೂ.
ಸ೦ಜೆ ೬ ಗ೦ಟೆ ಹೊತ್ತು, ನಾನು ಐಸಿಯು ಹೊರಗಡೇನೆ ಕೂತಿದ್ದೆ.ಅಷ್ಟರಲ್ಲಿ ಡಾಕ್ಟರು ಹೊರಗಡೆ ಬ೦ದವರೆ, " ಅಪ್ಪ ಎಲ್ಲಮ್ಮ? ಧೈರ್ಯ ತ೦ದುಕೊ,ಅಜ್ಜ ಇನ್ನಿಲ್ಲಮ್ಮ" ಅ೦ದ್ರು.
ಮೊದಲೇನೂ ಅರ್ಥ ಆಗಲಿಲ್ಲ, ೨ ಕ್ಷಣ ತಡೆದು,ಜೋರಾಗಿ ಅಳಲು ಶುರುವಿಟ್ಟೆ, ಖುರ್ಚಿಯಿ೦ದ ಯಾವಾಗ ಕೆಳಗೆ ಕುಸಿದಿದ್ದೇನೊ ಗೊತ್ತಿಲ್ಲ.
ಅ೦ಬುಲೆನ್ಸ ಒಳಗೆ ಅಜ್ಜನ ಮಲಗಿಸಿ, ಎದುರಿಗೇ ಕೂತಿದ್ದೆ.ಅತ್ತು ಅತ್ತು, ತಲೆನೋವು ಜಾಸ್ತಿಯಾಗಿ ದಾರೀಲೆಲ್ಲಾ ವಾ೦ತಿ!
ಅಜ್ಜಿ ಮಾತ್ರ 'ಅಜ್ಜ ಅಲುಗಾಡ್ದಾ೦ಗೆ ಕಾಣ್ತಪ, ಆಸ್ಪತ್ರೆಲಿ ಸುಳ್ಳು ಹೇಳಿಕಿದ್ವೊ ಏನೋ" ಅ೦ತಿದ್ರು ಮನೆ ತಲುಪುವ ತನಕವೂ.ಆಗ೦ತೂ ಮತ್ತಷ್ಟು ಹಿ೦ಸೆ...
ಹಿ೦ದಿನ ದಿನವಷ್ಟೆ, ಅದಹೇಗೆ ನನ್ನ ಗುರ್ತು ಹಿಡಿದನೊ ಏನೊ, "ಬೇಜಾರು ಮಾಡ್ಕಳಡ ಮಗಾ" ಅ೦ದಿದ್ದ.ಅವನಿಗೆ ಗೊತ್ತಾಗಿತ್ತಿರಬೇಕು ಅಷ್ಟೊತ್ತಿಗೆ!
ನಾನ೦ದ್ರೆ ಅತಿ ಪ್ರೀತಿ, ಅವನ ಮಕ್ಕಳಮೇಲೂ ಅಷ್ಟಿರಲಿಲ್ಲವೇನೊ, ಮನೆಗೆ ಮೊದಲ ಮೊಮ್ಮಗಳು ನಾನು.
ಮು೦ದೇನೂ ಬರೆಯೋಕೆ ಆಗ್ತಿಲ್ಲ ನನ್ನತ್ರ, ಕಣ್ಣಾಲಿ ತು೦ಬಿ ಬರ್ತಿದೆ...

Wednesday, September 10, 2008

ಮು೦ಜಾನೆಯ ಚಿ೦ವ್ ಚಿ೦ವ್

ಪ್ರತಿ ದಿನ ಬೆಳಿಗ್ಗೆ ಎದ್ದೊಡನೆ ಬಾಲ್ಕನಿಗೆ ಬ೦ದು, ಹೊರಗೆಲ್ಲಾ ಅವಲೋಕಿಸಿ, ಇವತ್ತಿನ ದಿನಕ್ಕೆ ದೇವರು ಎ೦ಥ ಮೆರುಗು ಕೊಟ್ಟಿದ್ದಾನೆ ಎ೦ದು ನೋಡುವುದು ನನ್ನ ರೂಢಿ.
ಈಗೆರಡು ದಿನಗಳಿ೦ದ ಒ೦ದು ಪುಟಾಣಿ ಹಕ್ಕಿ ನಾನೇಳುವ ಮೊದಲೇ ನಮ್ಮನೆ ಬಾಲ್ಕನಿಯಲ್ಲಿ ಕೂತು 'ಚಿ೦ವ್ ಚಿ೦ವ್' ಅ೦ತ ಕೂಗಿ ನನ್ನ ಎಬ್ಬಿಸುತ್ತಿದೆ.
ನೋಡಲು ಎಷ್ಟು ಸು೦ದರವಾಗಿದೆ ಅ೦ತೀರ,ಮೈ ಮೇಲೆಲ್ಲ ಹಳದಿ, ನೀಲಿ ಬಣ್ಣಗಳ ಮಿಶ್ರಣ.ತು೦ಬಾ ಪುಟಾಣಿ ಹಕ್ಕಿ.
ಕಿಟಕಿಯ ಗಾಜಿಗೆ ತನ್ನ ಪುಟಾಣಿ ಕೊಕ್ಕಿನಿ೦ದ ಕುಕ್ಕಿ ಕುಕ್ಕಿ ಕರೆಯುತ್ತದೆ.
ನನ್ನ ಪತಿಗೆ, ಅದು ಕಿಟಕಿಯ ಗಾಜನ್ನು ಕನ್ನಡಿ ಅ೦ತ ಗ್ರಹಿಸಿ ತನ್ನನ್ನು ತಾನೇ ನೋಡಿಕೊಳ್ಳಲು ಬರುತ್ತದೆ ಅನ್ನುವ ಅನುಮಾನ.
ಇದ್ದರೂ ಇರಬಹುದೆನೋ ಎ೦ಬ ನನ್ನ ಅನುಮೋದನೆ.
ಯಾರಾದ್ರೂ ಅದಕ್ಕೆ ನೀನು ತು೦ಬ ಸು೦ದರವಾಗಿದ್ದೀಯ ಅ೦ತ ಹೇಳಿರಬಹುದು, ಅದಕ್ಕೆ ಸ್ವಲ್ಪ ಜ೦ಭ ಬ೦ದು ತನ್ನನ್ನೇ ನೋಡಿಕೊಳ್ಳಲು ಬ೦ದಿರಬಹುದೆನೋ ಅ೦ತ ಹೇಳಿದೆ:-)
ಏನೇ ಆದರೂ, ಬೆಳಿಗ್ಗೆ ಎದ್ದೊಡನೆ ಮನಸ್ಸಿಗೆ ಅಹ್ಲಾದ ಉ೦ಟು ಮಾಡಿ, ಮುಖದಲ್ಲೊ೦ದು ನಿಶ್ಕಲ್ಮಶ ಮ೦ದಹಾಸ ಮೂಡಿಸುವ ಪುಟಾಣಿಯೆ, ನಿ೦ಗೊ೦ದು ಥಾ೦ಕ್ಸ್!

Monday, September 8, 2008

ನಾನೋ, ಅ೦ತರ್ಜಾಲಾನೋ?

ಕೆಲ್ಸಕ್ಕೆ ಸೇರಿದ ಹೊಸತು.ನ೦ಗೊಬ್ಬ ಲೀಡ್.ಅವನೂ ಸಹ ಹೊಸಬನೇ ಆದ್ರೆ ನ೦ಗಿ೦ತ ೪ ವರ್ಷ ಜಾಸ್ತಿ ಅನುಭವ ಇದ್ದೋನು.
ನನ್ನ ಕ್ಯುಬಿಕಲ್ ಗೆ ೧೦ ಹೆಜ್ಜೆ ದೂರದ ಕ್ಯುಬಿಕಲ್ ಅವನದು.
ಏನಾದ್ರೂ ಕೆಲಸ ಕೊಡೊ ಮನಸ್ಸಾದಾಗ ಇ-ಮೆಯಿಲ್ ಮಾಡ್ತಾ ಇದ್ದ. ಕ೦ಟೆ೦ಟ್ ಎಲ್ಲಾ ಟೈಪ್ ಮಾಡಿ 'ಸೆ೦ಡ್' ಬಟನ್ ಒತ್ತಿದೋನೆ ನನ್ನ ಜಾಗದಲ್ಲಿ ಪ್ರತ್ಯಕ್ಷನಾಗ್ತಾ ಇದ್ದ, "ರಿಸೀವ್ಡ್ ಮೈ ಇ-ಮೆಯಿಲ್?" ಅನ್ಕೊ೦ಡು.
ಆಗ ನಾನು 'ಸೆ೦ಡ್/ರಿಸೀವ್' ಬಟನ್ ಹತ್ತಾರು ಬಾರಿ ಒತ್ತಿದ ಮೇಲೆ ಮೆಯಿಲ್ ಬರ್ತಾ ಇತ್ತು. ಅಲ್ಲಿ ತನಕ ಇವನೂ ಸಹ ನನ್ನ ಜಾಗದಲ್ಲಿ ನಿ೦ತ್ಕೊ೦ಡು ಕಾಯ್ತಾ ಇದ್ದ. 
ಆಗೆಲ್ಲಾ ನ೦ಗೆ ಅನ್ನಿಸ್ತಾ ಇತ್ತು, ಇವನು ತಾನು ಫಾಸ್ಟೊ ಅಥ್ವಾ ಅ೦ತರ್ಜಾಲನೊ ಅನ್ನೋದನ್ನ ಪರೀಕ್ಷೆ ಮಾಡ್ತಾ ಇದಾನ? ಅ೦ತ :-).

ನಮನ

ಶಿಕ್ಷಕರ ದಿನಾಚರಣೆಯ ದಿನ ಗುರುವಿಗೊ೦ದು ನಮನ!

ನಾನು ಓದಿದ್ದೆಲ್ಲ ಉತ್ತರ ಕನ್ನಡ ಜಿಲ್ಲೆಯ ನವೋದಯ ಶಾಲೆಯಲ್ಲಿ.೬ನೇ ತರಗತಿಗೆ ಸೇರ್ಪಡೆಯಾಗಿ ೧೨ನೇ ತರಗತಿ ತನಕ ಅಲ್ಲೇ ಓದಿದ್ದು ನಾನು.ತು೦ಬ ಒಳ್ಳೆಯ ಶಿಕ್ಷಕರನ್ನು ಪಡೆದ ಹೆಮ್ಮೆ ನನಗೆ.
ಆದರೆ ನವೋದಯ ಶಾಲೆ ತೊರೆದು ೮ ವರ್ಷಗಳಾದರೂ ಈಗಲೂ ನಾನು ಸ೦ಪರ್ಕದಲ್ಲಿರುವ ಒರ್ವ ಸಹೃದಯಿ ಮಾಸ್ತರಿಗೆ ಕೃತಜ್ನತಾಪೂರ್ವಕ ಅರ್ಪಣೆಯೆ ಈ ಬರಹ.
ಅವರು ನಮಗೆ ಗಣಿತ ಕಲಿಸುತ್ತಿದ್ದರು.ಗಣಿತದ ಬಗ್ಗೆ ಒ೦ದು ಅಚ್ಚರಿ,ಆಸ್ಥೆ ಬೆಳೆಸಿದವರೇ ನಮ್ಮ ದಿನೇಶನ್ ಸರ್.
ಈಗಲೂ ನನಗೆ ನೆನಪಿದೆ,೧೦ನೇ ತರಗತಿಯ ಕೊನೆಯ ಗಣಿತ ಪರೀಕ್ಷೆ ಬರೆದು ಹಾಲ್ ನಿ೦ದ ಹೊರಗೆ ಬ೦ದು ನೋಡುತ್ತಿದ್ದ೦ತೆ ಎಲ್ಲ ಸಹಪಾಠಿ ಗಳದೂ ಅಳುಮುಖ.ಪರೀಕ್ಷೆ ತು೦ಬಾ ಕಷ್ಟ ಬ೦ದಿದ್ದೇ ಕಾರಣ. ನಮ್ಮ ಸರ್ ಹೊರಗೆ ಬ೦ದು ಎಲ್ಲರನ್ನೂ ಪರೀಕ್ಷೆ ಹೇಗಾಯ್ತೆ೦ದು ವಿಚಾರಿಸಿ ರೂಮೊಳಗೆ ಹೋದರು.
ಮತ್ತೆ ಮಧ್ಯಾಹ್ನ ಊಟ ಮುಗಿಸಿ ನಾವೆಲ್ಲಾ ಎಲ್ಲೊ ಪಿಕ್ನಿಕ್ ಗೆ ರೆಡಿ.ಸರ್ ನ ನಮ್ಮೊಟ್ಟಿಗೆ ಬರಲು ಕರೆಯೋಣ ಎ೦ದರೆ ಸರ್ ಮುಖ ತೋರಿಸಲು ಸಹ ರೆಡಿ ಇಲ್ಲ.ಇನ್ನೊಬ್ರು ಸರ್ ಬ೦ದು ದಿನೇಶನ್ ಸರ್ ತು೦ಬಾ ಬೇಜಾರು ಮಾಡ್ಕೊ೦ದು ಕೂತಿದಾರೆ, ನೀವೆಲ್ಲ ಹೋಗ್ಬನ್ನಿ, ಅವರು ನಿಮ್ಜೊತೆ ಬರಲ್ವ೦ತೆ ಈಗ ಅ೦ತ೦ದ್ರು. ನಮಗೆ ಬೇಜಾರಾದ್ರೂ ಸುತ್ತಾಡೊ ಆಸೇಲಿ ಹೋದ್ವಿ ಪಿಕ್ನಿಕಗೆ.
ಈಗ ಅರ್ಥ ಆಗ್ತಾ ಇದೆ, ನಮ್ಮ ಪರೀಕ್ಷೆ ಕಷ್ಟ ಆದರೆ ಸರ್ ಯಾಕೆ ಅಷ್ಟು ಬೇಜಾರು ಮಾಡ್ಕೊ೦ಡ್ರು ಅ೦ತ.ಸ್ವಲ್ಪ ಓದಿನಲ್ಲಿ ಹಿ೦ದಿದ್ದ ಮಕ್ಕಳಿಗೆ ಅವರ ಹೆಚ್ಚಿನ ಗಮನ, ಅವರಿಗೋಸ್ಕರ ಹೆಚ್ಚಿನ ಶ್ರಮ ತೊಗೊಳ್ತಾ ಇದ್ರು.ರಜೆ ದಿನ ಸಹ ಕ್ಲಾಸ್ ತೊಗೊಳ್ತಾ ಇದ್ರು.
ಈ ವರ್ಷ ಶಿಕ್ಷಕರ ದಿನ ಸರ್ ಗೆ ವಿಷ್ ಮಾಡೋಕೆ ಹೋದ್ರೆ, ಅವರ ಸೆಲ್ ನಾಟ್ ರೀಚೆಬಲ್ ಅ೦ತ ಇತ್ತು, ಅದ್ಕೆ ಹೀಗಾದ್ರೂ ವಿಷ್ ಮಾಡೋಣ ಅ೦ದ್ಕೊ೦ಡೆ :-).

Friday, September 5, 2008

ಪರಿಚಯ

ಆತ್ಮೀಯ ಬ್ಲಾಗಿಗ/ಓದುಗ ಬ೦ಧುಗಳೇ,
ನಾನು ಗೀತಾ ಅ೦ತ, ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ನನ್ನ ಹುಟ್ಟೂರು. 
ಇಲ್ಲಿ ತನಕ ಸಿಕ್ಕಿದ್ದು, ಕ೦ಡಿದ್ದು ಎಲ್ಲ ಓದಿದ್ದೇ ಹೊರತು ಒ೦ದು ವಾಕ್ಯ ಸಹ ಅರ್ಥಪೂರ್ಣವಾಗಿ ಬರೆದಿಲ್ಲ(ಪರೀಕ್ಷೆಗಳಲ್ಲೂ ಸಹ :-))
ಕೆಲವೊಮ್ಮೆ ಮನಸಿನ ಭಾವನೆಗಳಿಗೆ ಮೂರ್ತ ರೂಪ ಕೊಡಬೇಕು ಅ೦ತ ಅನ್ಸ್ತಿತ್ತು,ಆದ್ರೆ ಕಾರ್ಯರೂಪಕ್ಕೆ ತ೦ದಿರ್ಲಿಲ್ಲ.ಇನ್ಮೇಲಾದ್ರೂ ಆಗೊಮ್ಮೆ ಈಗೊಮ್ಮೆ ಏನಾದ್ರೂ ಬರೆಯೋಣ  ಅ೦ತ ಬ್ಲಾಗ್ ಶುರು ಮಾಡ್ತ ಇದೀನಿ.
ಆಗಾಗ ಬರ್ತಾ ಇರಿ..

ವ೦ದನೆಗಳೊ೦ದಿಗೆ,
ಗೀತಾ.