Wednesday, March 2, 2011

ಮನವಿ- 'ಚಂದ್ರುವಿಗೆ ಸಹಾಯ ಮಾಡಿ'

ಆತ್ಮೀಯ ಓದುಗ ಮಿತ್ರರೇ,

ನಮ್ಮ ಸಾಫ್ಟ್ವೇರ್ ಸಹವರ್ತಿ ಗೆಳೆಯನೊಬ್ಬ ಬದುಕಿನ ಬಹು ದೊಡ್ಡ ಹೋರಾಟದಲ್ಲಿ ನಮ್ಮೆಲ್ಲರ ಆರ್ಥಿಕ ಸಹಾಯ ಅಪೇಕ್ಷಿಸುತ್ತಿದ್ದಾನೆ.
ನನ್ನ ಕೈಲಾದ ಕರ್ತವ್ಯ ಮಾಡಿ, ಗೆಳೆಯನ ನೆಮ್ಮದಿಯ ನಾಳೆಗೋಸ್ಕರ ನಿಮ್ಮೆಲ್ಲರ ಸಹಾಯ ಕೋರುತ್ತಿದ್ದೇನೆ.
ಅಂತರ್ಜಾಲದ ಕೊಂಡಿ- "http://helpchandru.com/".

Thursday, February 11, 2010

ಪಾಸ್ಪೋರ್ಟ್ ಕಳ್ಳತನ ಹಾಗೂ nephrotic syndrome

ಗೆಳೆಯ/ಗೆಳತಿಯರೆ, ಎಲ್ಲರಿಗೂ ನಮಸ್ಕಾರ.
ಇಷ್ಟು ದಿನಗಳ ಕಾಲ ಬ್ಲಾಗ್ ಲೋಕದಿಂದ ದೂರ ಉಳಿದಿದ್ದಕ್ಕೆ ಕ್ಷಮೆಯಿರಲಿ.
ಇಟಲಿಯಿಂದ ಬರುವುದರೋಳಗೆ ಆದ ಅವಘಡ ಗಳಿಂದ ಸುಧಾರಿಸಿಕೊಳ್ಳಲು ಇಷ್ಟು ದಿನ ಬೇಕಾಯಿತು.
ಇಟಲಿಯಿಂದ ಹೊರಡುವ ದಿನ ಗಣಪತಿಯ ಪಾಸ್ಪೋರ್ಟ್ ಕಳ್ಳತನವಾಯಿತು. ಅಲ್ಲಿ ತುಂಬಾ ಓಡಾಟವಾಗಿ ಅಂತೂ ಇಂತೂ ಭಾರತಕ್ಕೆ ಬಂದಾಯಿತು.
ಬರುವಾಗಲೇ 'Nephrotic Syndrome' ಅನ್ನುವ ಕಾಯಿಲೆಯೊಂದು ಗಣಪತಿಯ ಬೆನ್ನು ಬಿದ್ದಿತ್ತು. ಮೈ ಕೈ ಎಲ್ಲ ಊದಿ ತುಂಬಾ ದಪ್ಪಗಾಗಿಬಿಟ್ಟಿದ್ದರು.
ಬಂದ ಕೂಡಲೇ ಹೋಸ್ಪಿಟಲ್ ಗೆ ಅಡ್ಮಿಟ್ ಆದದ್ದು. ಈಗ ಮನೆಯಲ್ಲೇ steroids ತೆಗೆದುಕೊಳ್ಳಬೇಕು. steroids dosage ಕಡಿಮೆ ಮಾಡಿದಾಗ ಮತ್ತೆ ವಾಪಸ್ ರೋಗ ಪುನರವರ್ತನೆಯಾಗುತ್ತೆ. ತಿಂಗಳಾನುಗಟ್ಟಲೆ ಯಾದರೂ ಅದರ ಪ್ರಭಾವ ಇನ್ನು ಕಡಿಮೆಯಾಗಿಲ್ಲ. ಒಂಥರಾ ಜೀವನ ರೋಸಿ ಹೋಗಿದೆ.

ನನ್ನ ಬ್ಲಾಗ್ ಸ್ನೇಹಿತರಲ್ಲಿ ಒಂದು ವಿನಂತಿ, ನಿಮಗೆ ತಿಳಿದವರಲ್ಲಿ ಯಾರಿಗಾದರೂ ಈ ರೋಗ ಬಂದಿತ್ತೆ? ಹೌದಾದರೆ, ಅವರು ಈಗ ಪೂರ್ತಿ ವಾಸಿಯಗಿದ್ದಾರ? ಅಂಥವರಿದ್ದರೆ ನಾನು ಮಾತಾಡಲು ಬಯಸುತ್ತೇನೆ. ಇದೊಂಥರ ಕಿರಿಕಿರಿ ಕೊಡುವ ಖಾಯಿಲೆ. ನಿಮ್ಮ ಉತ್ತರಗಳಿಗೆ ಕಾದಿದ್ದೇನೆ.

Monday, June 29, 2009

ಇಟಲಿಯ ಜನಜೀವನ, ಸಂಸ್ಕೃತಿ -ನಾ ಕಂಡಂತೆ

ಇಲ್ಲಿಗೆ ಬಂದು ಆಗಲೇ ೭ ತಿಂಗಳುಗಳಾಗುತ್ತ ಬಂದವು.
ನನಗನಿಸಿದಂತೆ ಇಲ್ಲಿಯ ಜನ ತುಂಬಾ ಸ್ನೇಹಪರರು. ಪರಿಚಯವೇ ಇಲ್ಲದ ವ್ಯಕ್ತಿ, ಸುಮ್ಮನೆ ದಾರಿಯಲ್ಲಿ, ಲಿಫ್ಟ್ ನಲ್ಲಿ ಸಿಕ್ಕವರೂ ಸಹ ನಿಮಗೆ ವಿಶ್ ಮಾಡಿಯೇ ಮುಂದೆ ಹೋಗುತ್ತಾರೆ ಒಂದು ಚಂದದ ಮುಗುಳ್ನಗೆಯೊಂದಿಗೆ.
ಬಂದು ಇಷ್ಟು ದಿನಗಳಾದರೂ ಯಾರೇ ಒಬ್ಬರು ಇನ್ನೊಬ್ಬ ವ್ಯಕ್ತಿಯೊಂದಿಗೆ ದೊಡ್ಡದಾಗಿ ಮಾತನಾಡುವುದನ್ನೂ ಕೇಳಿಲ್ಲ, ಇದೇನು ಇಲ್ಲಿಯದೊಂದೇ ಹೆಚ್ಚುಗಾರಿಕೆಯಲ್ಲ ಬಿಡಿ, ಪಾಶ್ಚಾತ್ಯ ಜನ ಇರುವುದೇ ಹೀಗೆ ಅಲ್ಲವೇ?ನಾನು ಅಮೆರಿಕಾವನ್ನೂ ಸಹ ಸ್ವಲ್ಪ ದಿನ ನೋಡಿಬಂದಿರುವುದರಿಂದ ಪದೇ ಪದೇ ಮನಸ್ಸು ಅಲ್ಲಿಗೂ ಇಲ್ಲಿಗೂ ತುಲನೆ ಮಾಡುತ್ತೆ.

ಆದರೆ ಇಲ್ಲಿಯ ಜನ ಸಂಸಾರಸ್ಥರು. ಹೆಂಡತಿ, ಮಕ್ಕಳು ಅಂತ ಕಾರ್ ನಲ್ಲಿ ಒಟ್ಟಿಗೆ ಹೋಗುತ್ತಿರುತ್ತಾರೆ. ಅಮೆರಿಕದಲ್ಲಿ ನಾನು ಜಾಸ್ತಿ ಒಂಟಿ ಜೀವಗಳನ್ನೇ ನೋಡಿದ್ದೇನೆ, ಒಬ್ಬಂಟಿ ಕಾರ್ ಡ್ರೈವರ್ ಗಳೇ ಜಾಸ್ತಿ.ಆದ್ರೆ ಇಲ್ಲಿಯ ಜನ ಸಂಸಾರ ಹೂಡುವುದು ತುಂಬಾ ತಡವಾಗಿ.೩೫-೪೦ ದಾಟಿದ ಮೇಲೆ. ಅಲ್ಲಿಯ ತನಕ ಜೀವನವನ್ನು ಬೇಕಾಬಿಟ್ಟಿಯಾಗಿ ಅನುಭವಿಸಿಬಿಡುತ್ತಾರೆ. ನಾಯಿ ಇಲ್ಲಿಯ ಅತಿಪ್ರೀತಿ ಸಾಕುಪ್ರಾಣಿ. ಪ್ರತಿಯೊಬ್ಬ ಮನುಷ್ಯನಿಗೂ ಒನ್ದೊನ್ದು ನಾಯಿ. ನಾನು ಇಲ್ಲಿ ಬಂದ ಮೇಲೇನೆ ತರಹೇವಾರು ನಾಯಿಗಳನ್ನು ನೋಡಿದ್ದು.

ಇಲ್ಲಿಯ ಜನ ಕೆಲವೊಂದು ವಿಷಯದಲ್ಲಿ ಇನ್ನು ಓಬೀರಾಯನ ಕಾಲದಲ್ಲೇ ಇದ್ದಾರೆ, ಇನ್ನೂ floppy disk ಬಳಸುತ್ತಾರೆ ;).
ಇಲ್ಲಿನ ಸರಕಾರೀ ಕೆಲಸವೆಂದರೆ ತಲೆನೋವು. ನನ್ನ ವಿಸಾಗೆ ಸಂಬಂಧ ಪಟ್ಟ ಕೆಲವು ಕೆಲಸಗಳಿಗೆ ಇಲ್ಲಿ ತುಂಬಾ ಅಲೆದಾಡಿ ಬಿಟ್ಟಿದ್ದೇವೆ. ಸಾವಿರಾರು processuuu. ಇಲ್ಲಿ ೧ ವರ್ಷದ ಕಾಲ ಉಳಿಯಬೇಕೆಂದರೆ ಬಾಡಿಗೆ ಮನೆ ಪಡೆಯಲೇಬೇಕು, ಅದನ್ನು ಇಲ್ಲಿಯ ಕಮ್ಯುನಿಟಿ ಆಫೀಸ್ನಲ್ಲಿ ನೋಂದಾಯಿಸಬೇಕು, ಮತ್ತೆ ರೆಸಿಡೆಂಟ್ ಪೆರ್ಮಿಟ್ ಪಡೆಯಬೇಕು.
ಅದಕ್ಕೆ ಸಾವಿರಾರು ಆಫೀಸ್ ಗಳಿಗೆ ಅಲೆದಾಟ. ಪ್ರತಿ ಏರಿಯದಲ್ಲೂ ದೊಡ್ಡ ದೊಡ್ಡ ಕಮ್ಯುನಿಟಿ ಆಫೀಸ್ ಗಳು.
ಅಲ್ಲಿ ಕೆಲಸ ಮಾಡಲು ತುಂಬ ಜನ. ಸರತಿ ಸಾಲಲ್ಲಿ ನಿಂತರೆ ತಲೆ ಕೆಟ್ಟು ಹೋಗುತ್ತೆ. ತುಂಬಾ ನಿಧಾನಕ್ಕೆ ಕೆಲಸ ಮಾಡುತ್ತಾರೆ, ಅದೂ ಬರೀ ಅರ್ಧ ದಿನ ಮಾತ್ರ ಕೆಲಸ. ಮಧ್ಯಾಹ್ನ ಏನು ಮಾಡುತ್ತಾರೋ ಗೊತ್ತಿಲ್ಲ.
ಅದಕ್ಕೂ ದೊಡ್ಡ ತೊಂದರೆಯೆಂದರೆ ಜನರಿಗೆ ಇಂಗ್ಲಿಷ್ ಏನೇನೂ (ಅಂದ್ರೆ ಸುಟ್ಟುಕೊಂಡು ತಿನ್ನಕ್ಕೂ) ಬರಲ್ಲ. ತುಂಬಾ ಕಡಿಮೆ ಜನ ಇಂಗ್ಲಿಷ್ ಮಾತನಾಡುತ್ತಾರೆ.
ನನಗಂತೂ ಗೂಗಲ್ translator ಬಳಸಿ ಬಳಸಿ ರೂಧಿಯಾಗಿಬಿತ್ತಿದೆ ಈಗ.

ಅದೇ ಅಮೆರಿಕಾದಲ್ಲದರೆ SSN ಪಡೆದರೆ ಆಗಿಯೇ ಹೋಯಿತು, ಮತ್ತೇನೂ ಕಿರಿಕಿರೀಯಿರೋಲ್ಲ.

ಇನ್ನು ಇಲ್ಲಿ ಅಂಗಡಿಗಳೆಲ್ಲ ಬೆಳಿಗ್ಗೆ ೮.೩೦ ಗೆ ಓಪನ್ ಆಗುತ್ವೆ. ೧೨.೩೦ ತನಕ ಕೆಲಸ. ೩.೩೦ ತನಕ ಊಟದ ವಿಶ್ರಾಮ.
ಮತ್ತೆ ಸಂಜೆ ೭ ಗಂಟೆಯ ತನಕವಸ್ಟೇ.
ಇನ್ನು ಪ್ರತಿ ರವಿವಾರ, ರಜಾ ದಿನಗಳಲ್ಲಿ ಅಂಗಡಿ, ಮಾಲ್ಸ್ ಎಲ್ಲ ಬಂದ್.
ಮೊದಲೇ ಪ್ಲಾನ್ ಮಾಡಿ ಎಲ್ಲ ಸಾಮಾನು ತೆಗೆದಿಟ್ಟುಕೊಳ್ಳಬೇಕು, ನಮ್ಮಲ್ಲಿಯ ಥರ ನೆನಪಾದಾಗ ಅಂಗಡಿಗೆ ಓಡುವ ಹಾಗಿಲ್ಲ.

ಮತ್ತೆ ಇಲ್ಲಿ ಅಪಾರ್ಟ್ಮೆಂಟ್ ಆಗಲಿ, ಮನೆಯಾಗಲಿ ಪಾರ್ಕಿಂಗ್ ಏರಿಯ ಇಲ್ಲವೇ ಇಲ್ಲ ಅಂತ ಹೇಳಬಹುದು. ರಸ್ತೆಯ ಒಂದು ಪಾರ್ಶ್ವವೆ ಇವರ ಪಾರ್ಕಿಂಗ್ ಜಾಗ. ಕೆಲವೊಂದು 'one-way' ರೋಡ್ ಗಳೆಲ್ಲ ಪಾರ್ಕಿಂಗ್ ಲೋಟ್ ಗಳೇ ಆದರೂ ಟ್ರಾಫಿಕ್ ನ ಸಮಸ್ಯೆಯೇನೂ ಇಲ್ಲ.

ನನ್ನ ಗಂಡ ಕೆಲಸ ಮಾಡುವ ಕಂಪನಿಯಲ್ಲಿ ವರ್ಷಕ್ಕೆರಡು ಬಾರಿ ಅಂದ್ರೆ ಒಮ್ಮೆ ಕ್ರಿಸ್ಮಸ್ ಟೈಮ್ ನಲ್ಲಿ, ಹಾಗೂ ಇನ್ನೊಮ್ಮೆ ಆಗಸ್ಟ್ ನಲ್ಲಿ ೧೫ ದಿನಗಳಸ್ಟು ಕಾಲ ರಜೆ ಇರುತ್ತದೆ. ಇದೊಂದೆ ಅಲ್ಲ, ಎಲ್ಲ ಆಫೀಸ್ ಗಳಲ್ಲೂ ಅಷ್ಟೇ. ಜನ ಜೀವನವನ್ನು ಅನುಭವಿಸುತ್ತಾರೆ ಅವರಿಗೆ ಬೇಕಾದ ಹಾಗೆ.

ಇಲ್ಲಿಯ ಮುಖ್ಯ ಆದಾಯ tourism. ತುಂಬಾ ವ್ಯವಸ್ಥಿತವಾಗಿ ಕಟ್ಟಲ್ಪಟ್ಟ ನಗರಗಳು, ಅಲ್ಲಿನ ವ್ಯವಸ್ಥೆ ಎಲ್ಲ ಅನುಭವಿಸಿಯೇ ನೋಡಬೇಕು. ರೋಮನ್ನರು ತುಂಬಾ ಜಾಣರು. ಅವರ ನಗರಗಳ ಪರಿಕಲ್ಪನೆ ಆಗಲೇ ಎಸ್ಟೊಂದು ಚೆನ್ನಾಗಿತ್ತು!
ನಗರ ಸಂಚಾರ ವ್ಯವಸ್ಥೆ ಸಹ ತುಂಬಾ ಚೆನ್ನಾಗಿದೆ. ಬಸ್, ರೈಲು, ಮೆಟ್ರೋ, funicular, tram, ಎಲ್ಲ ಥರ ವಾಹನ ಸೌಕರ್ಯಗಳಿವೆ. ಹಾಗೂ ಪ್ರವಾಸಿಗರಿಗೂ, ಪ್ರತಿ ದಿನದ ಸಂಚಾರಿಗಳಿಗೂ ಎಲ್ಲರಿಗೂ ಅನುಕೂಲಕರವಾಗಿದೆ.

ಎಲ್ಲ ಥರದ ಜನ ಇದ್ದಾರೆ ಇಲ್ಲಿ. ಬಡವ, ಶ್ರೀಮಂತ, ಭಿಕ್ಶುಕರೂ ಸಹ. ಅಂಗಡಿಯೆದುರು, ಟ್ರಾಫಿಕ್ ಸಿಗ್ನಲುಗಳಲ್ಲಿ ಭಿಕ್ಷುಕರು ಕಾಣಸಿಗುತ್ತಾರೆ. ಆಫ್ರಿಕಾದ ಜನ ಜಾಸ್ತಿ. ಇವರ ಉದ್ಯೋಗ ದಾರಿ ಬದಿಯಲ್ಲಿ ಸಾಮಾನುಗಳ ಗುಡ್ಡೆ ಹಾಕಿಕೊಂಡು ಮಾರುವುದು, ಪೋಲಿಸ್ ಬಂದ ಕೂಡಲೇ ಚೆಲ್ಲಪಿಲ್ಲಿಯಾಗಿ ಓಡುತ್ತಾರೆ.

ಮತ್ತೆ ಇಲ್ಲಿ ಶ್ರೀಲಂಕದವರು, ಬಂಗ್ಲಾದೆಶಿಯರು, ಚೀನಿಗಳು ಜಾಸ್ತಿ. ಇಂಡಿಯನ್ ಸ್ಟೋರ್ಸ್ ಥರದ ಅಂಗಡಿಗಳಿಲ್ಲ, ಆದರೆ ಚೀನಿ, ಆಫ್ರಿಕನ್, ಶ್ರೀಲಂಕನ್ ಸ್ಟೋರ್ಸ್ ನಲ್ಲಿ ನಮಗೆ ಬೇಕಾದ್ದೆಲ್ಲ ಸಿಗುತ್ತವೆ. ಈ ಅಂಗಡಿಗಳ ಕೃಪಾ ಕಟಾಕ್ಷದಿಂದಲೇ ನಾವು ಭಾರತೀಯರು ಇಲ್ಲಿ ಜೀವಿಸುತ್ತಿದ್ದೇವೆ.

ನಮ್ಮ ಮನೆಯ ಓನರ್ ಭಾರತವನ್ನು ಸಾಕಷ್ಟು ಸಲ ಸುತ್ತಿ ಬಂದಿದ್ದಾರೆ. ನಾನೂ ನೋಡದಷ್ಟು ಭಾರತವನ್ನು ಅವರು ನೋಡಿದ್ದಾರೆ. ಅವರಿಗೆ ಇಂಡಿಯನ್ಸ್ ಅಂದರೆ ಏನೋ ಒಂಥರಾ ಪ್ರೀತಿ, ಮನೆ ಬಾಡಿಗೆ ಕೊಡಬೇಕಾದರೆ ಎಲ್ಲರೂ strangers ಎಂದು ಒಮ್ಮೆ ಯೋಚಿಸುತ್ತಾರೆ. ಆದರೆ ಇವರು ಮಾತ್ರ ಹಾಗೆ ಮಾಡಲಿಲ್ಲ.
ನಾವು ಈ ಮನೆ ಬಿಟ್ಟ ಮೇಲೆ (ಜುಲೈ ಕೊನೆ ವಾರದಲ್ಲಿ ನಾವು ಭಾರತಕ್ಕೆ ಮರಳುತ್ತಿದೇವೆ) ನಿನ್ನ ಇಂಡಿಯನ್ ಫ್ರೆಂಡ್ಸ್ ಯಾರಿಗಾದರೂ ಈ ಮನೆ ಬಾಡಿಗೆಗೆ ಬೇಕಿದ್ದರೆ ಹೇಳು ಅಂತ ನನ್ನ ಗಂಡನ ಕೇಳುತ್ತಿದ್ದರು.

ತುಂಬಾ ಜಾಸ್ತಿ ಬರೆದುಬಿಟ್ಟೆ ಅಂತ ಕಾಣುತ್ತಿದೆ. ಮತ್ತೊಮ್ಮೆ ಸಿಗುವ, ಇಂಟರೆಸ್ಟಿಂಗ್ ವಿಷಯಗಳ ಜೊತೆ.

Friday, May 15, 2009

ಚಿಂಕ್ವೆ ತೆರ್ರೆ- ಮೆಡಿಟರೇನಿಯನ್ ಕೋಸ್ಟ್ ಲೈನ್-ಒಂದು ಅನುಭವ

ಚಿಂಕ್ವೆ ತೆರ್ರೆ ಅಂದ್ರೆ ಐದು ಹಳ್ಳಿಗಳು ಅಂತರ್ಥ.

ಈ ಐದು ಹಳ್ಳಿಗಳು- riomaggiore, manarola, corniglia, vernazza ಮತ್ತು monterosso.

ಇಟಲಿಯ ಪೂರ್ವ liguria ಪ್ರಾಂತ್ಯದಲ್ಲಿರುವ ಈ ಹಳ್ಳಿಗಳು ಪ್ರವಾಸಿಗರಿಗೆ ಸಮುದ್ರದ ಮನಮೋಹಕ ದೃಶ್ಯದೊಂದಿಗೆ ಒಳ್ಳೆ ಟ್ರೆಕ್ಕಿಂಗ್/ಹೈಕಿಂಗ್ ಅನುಭವವನ್ನೂ ಒದಗಿಸುತ್ತವೆ.

ನಾವು ಸಹ ಇದೊಂದು ಹೊಸ ಅನುಭವವಾಗಲಿ ಎಂದು riomaggiore ಯಿಂದ ನಮ್ಮ ಕಾಲ್ನಡಿಗೆಯ ಪ್ರಯಾಣ ಆರಂಭಿಸಿದೆವು
ಬೆಳಿಗ್ಗೆ ೯ ಘಂಟೆಗೆ ಹೊರಟಿದ್ದೆವು. ಸಂಜೆಯೊಳಗೆ ಕೊನೆಯ ಹಳ್ಳಿ monterosso ವನ್ನು ತಲುಪುವ ಇಚ್ಚೆಯಿತ್ತು.
ಮಧ್ಯದಲ್ಲೇ ಟಯರ್ ಪಂಕ್ಚರ್ (ನಮ್ಮ ದೇಹದ್ದು) ಆದರೆ ಮುಂದಿನ ಹಳ್ಳಿಯಲ್ಲಿ ಟ್ರೈನ್ ಹತ್ತಿ ವಾಪಸ್ಸು ಬರುವ ಅಲ್ಟರ್ನಟಿವ ಯೋಜನೆ ನನ್ನ ತಲೆಯಲ್ಲಿತ್ತು.
ಯಾಕಂದ್ರೆ ಹೀಗೆ ಒಟ್ಟು ೧೨ ಕಿಲೋಮೀಟರು ನಡೆಯುತ್ತೇನೆಂದು ಆ ದೇವರಾಣೆಯಾಗಿ ನನ್ನ ಮೇಲೆ ನಂಗೆ ನಂಬಿಕೆಯಿರಲಿಲ್ಲ.

ಈ ಮ್ಯಾಪ್ ನಲ್ಲಿ ಕಾಣಿಸುವ ನೀಲಿ ಗೆರೆ ನಮ್ಮ trail ನ್ನು ಸೂಚಿಸುತ್ತಿದೆ. ಇದಕ್ಕೆ 'sentiero azzuro 2' ಅಂದ್ರೆ sky blue path -2 ಅಂತ ಕರೆಯುತ್ತಾರೆ.
ಕೆಳಗಿನ ಚಿತ್ರದಲ್ಲಿ ತೋರಿಸಿದ್ದು riomaggiore ಯಿಂದ ಹೊರಟ ಕೂಡಲೇ ಸಿಗುವುದು 'via dell'a Almore' ಅಂದ್ರೆ 'road of love'.


ಮುಂದೆ ಸಿಗುವುದು ಮನರೋಲ ಹಳ್ಳಿ. ಹಳ್ಳಿಯ ಒಂದು ನೋಟ.


"ಮಾತು ಹೇಳದ್ದನ್ನು ಚಿತ್ರ ಹೇಳೀತು" ಎಂಬಂತೆ ಇನ್ನು ಕೆಲವು ಚಿತ್ರಗಳನ್ನೇ ಇಲ್ಲಿ ಹಾಕುತ್ತಿದ್ದೇನೆ. ದಾರಿಯಲ್ಲಿ ಪ್ರಕೃತಿ ಉಣಬಡಿಸಿದ ಸುಂದರ ದೃಶ್ಯಾವಳಿಗಳ ಅನಾವರಣ ಇದು.


ಇದು 'V' ಚಾನೆಲ್.ಕಾರ್ನಿಲಿಯ ಹಳ್ಳಿಯ ಹತ್ತಿರ.ಇದು trail ನ ಇನ್ನೊಂದು ಪಾರ್ಶ್ವದ ನೋಟ. ಇದು vineyard, ಮತ್ತೆ ಇಲ್ಲಿ ನಿಂಬೆಹಣ್ಣು ಬೆಳೆಯುತ್ತಾರೆ. ಒಂಥರಾ terraced ಆಗಿದೆ ಗುಡ್ಡ!ಇದು ಕಾರ್ನಿಲಿಯ ಹಳ್ಳಿಯ ಹತ್ತಿರ. ಸಮುದ್ರದ ಪಕ್ಕದಲ್ಲೇ ರೈಲ್ವೆ ಹಳಿ ಹಾದು ಹೋಗಿದೆ.ಇದು ನಾನು ರೀ!ಎಷ್ಟು ಚೆನಾಗಿದೆ ಆಲ್ವಾ?ಸಿಕ್ಕಾಪಟ್ಟೆ ಸುಸ್ತಾಗಿದ್ರೂ ಫೋಟೋಕ್ಕೆ ಪೋಸ್ ಕೊಡಿ ಅಂತ ದುಂಬಾಲು ಬಿದ್ದು ತೆಗೆದಿದ್ದೆ ಈ ಫೋಟೋ!

ಇದು ನಿಂಬೆ ಪಾನಕದ ಅಂಗಡಿ. ದಾರಿಯ ಮಧ್ಯೆ ಚೇತೋಹಾರಿಯಾಗಿತ್ತು ನಿಂಬೆ ಪಾನಕದ ಸೇವನೆ! ನಮ್ಮನ್ನು ನೋಡಿ, 'ಇಂಡಿಯಾ ನ? ಮ್ಯಾಂಗೋ ಲಸ್ಸಿ?' ಅಂತೆಲ್ಲ ಕೇಳ್ದ ಅವನು. ಯಾಕೋ ಗೊತ್ತಿಲ್ಲ! ಹು0 ಅಂತ ತಲೆ ಅಲ್ಲಾಡಿಸಿದ್ವಿ ಅಷ್ಟೇ. ಮತ್ತೇನು ಮಾತಾಡಕ್ಕೂ ಶಕ್ತಿ ಇಲ್ಲ.


ಇದು varnazza ಹಳ್ಳಿ. ಮೇಲ್ಗಡೆಯಿಂದ ನೋಡೋಕೆ ತುಂಬಾ ಚೆನ್ನಾಗಿದೆ.

ಇದು ಕೊನೆಯ ತಾಣ, monterosso. ಇಲ್ಲಿ ಸ್ವಲ್ಪ ಹೊತ್ತು ವಿರಮಿಸಿ, ಊರ ಒಳಗೆಲ್ಲ ಸುತ್ತಾಡಿ ವಾಪಸ್ಸು ಟ್ರೈನ್ ಹತ್ತಿದ್ದು. ಕಾಲು ದೇಹದಿಂದ ಪೂರ್ತಿ ಬೇರೆಯಾದ ಹಾಗೆ ಫೀಲ್ ಆಗ್ತ ಇತ್ತು. ಅಂತೂ ಒಂದು ಅದ್ಭುತ ಅನುಭವ!
Wednesday, April 22, 2009

ಪ್ರೀತಿಯ ಅಜ್ಜಿ ಇನ್ನಿಲ್ಲ

ಮೊನ್ನೆ ಮೊನ್ನೆಯಷ್ಟೇ ರೋಮಿನ ಗಲ್ಲಿ ಗಲ್ಲಿಗಳಲ್ಲಿ ಅಡ್ಡಾಡಿ ಬಂದು ಇನ್ನೇನು ಬ್ಲಾಗ್ ತುಂಬಿಸಬೇಕು ಅನ್ನುವಷ್ಟರಲ್ಲಿ ಘಟಿಸಿದ್ದು ಈ ದುರ್ಘಟನೆ.
ಇಟಲಿಗೆ ಬರುವಾಗ ನನ್ನ ಮುದ್ದುಗರೆದು, ಹೋಗಿ ಬಾ ಅಂತ ಬೀಳ್ಕೊಟ್ಟ ಅಜ್ಜಿ ಇನ್ನೊಮ್ಮೆ ನೋಡಲು ಸಿಗುವುದಿಲ್ಲ ಅಂತ ಆ ಕ್ಷಣದಲ್ಲಿ ಅನ್ನಿಸಿರಲಿಲ್ಲ.
ತೀರ ಮೊನ್ನೆ ಮೊನ್ನೆ ಯವರೆಗೂ ಫೋನಿನಲ್ಲಿ ಕ್ಷೇಮ ಸಮಾಚಾರ ವಿಚಾರಿಸುತ್ತಾ ಇದ್ದವಳಿಗೆ, ನನ್ನ ಹೊಸ ಅಡುಗೆ ಪ್ರಯೋಗದ ಬಗ್ಗೆ ತಿಳಿಸಿದಾಗೆಲ್ಲ, 'ನಂಗೆ ಕೊಡ್ತಿಲ್ಯನೆ ಮಗಾ?' ಅಂತಿದ್ದವಳಿಗೆ 'ಫೋನ್ ನಲ್ಲೆ ಕೊಡ್ತೆ, ತಕ' ಅಂತೆಲ್ಲ ಹೇಳ್ತಿದ್ದದ್ದು ಇನ್ನು ನೆನಪು ಮಾತ್ರ ಅಷ್ಟೆ.
ಹುಶಾರಿಲ್ಲವೆಂದು ೩ ದಿನ ಆಸ್ಪತ್ರೆಯಲ್ಲಿ ನರಕವಾಸ ಅನುಭವಿಸಿ, ಆಮೇಲೆ ತೀರ ಗಡಿಬಿಡಿಯಲ್ಲಿ ಹೊರಟೇ ಹೋದಳು.
ಬಹುಶ ೫ ವರ್ಷಗಳಿಂದ ಕಾಯುತ್ತಿದ್ದ ಅಜ್ಜನ ವತ್ತಾಯ ಜಾಸ್ತಿಯಾಗಿರಬೇಕು.
ಇಲ್ಲಿ, ಗಂಡನ ಆಫೀಸಿಗೆ ಕಳಿಸಿ ಇಡೀ ದಿನ ಭೂತ ಬಂಗಲೆಯಂತ ಮನೆಯಲ್ಲಿ ಒಬ್ಬಂಟಿ ಯಾಗಿ ಕುಳಿತಿರುವಾಗ ಎಲ್ಲಿ ಹೋದರೂ ಅಜ್ಜಿಯ ನೆನಪು ಕಿತ್ತು ತಿನ್ನುತ್ತಿದೆ.
ದುಃಖವನ್ನು ಅಕ್ಷರ ರೂಪದಲ್ಲಿ ಹೊರ ಹಾಕಿ ಸ್ವಲ್ಪವನ್ನಾದರೂ ಹಗುರಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

Monday, March 16, 2009

ಪೀಸಾನೋ, ಪೀಜ್ಜಾನೋ ?

ಎರಡು ವಾರಗಳ ಹಿಂದೆ ಪೀಸಾ ಗೋಪುರ ನೋಡಲು ಹೋಗಿದ್ವಿ. ಅದೇ, ವಾಲುತ್ತಿರುವ ಪೀಸಾ.
ನಾವಿರುವ ಜೀನೋವದಿಂದ ಪೀಸಾ ಎ೦ಬ ಊರಿಗೆ ಮೂರೂವರೆ ಘಂಟೆಗಳ ರೈಲು ಪ್ರಯಾಣ. ಬೆಳಿಗ್ಗೆ 7.30 ಗೆಲ್ಲಾ ಮನೆ ಬಿಟ್ವಿ. ಪೀಸಾ ರೈಲ್ವೆ ಸ್ಟೇಷನ್ ತಲುಪುವ ಹೊತ್ತಿಗೆ 11.30 ಯಾಗಿತ್ತು.
ಅಲ್ಲಿಂದ ಮುಂದೆ ಬಸ್ ಹಿಡಿಯಬೇಕಿತ್ತು. ಟಿಕೆಟ್ ಕೊಂಡು ಸ್ಟೇಷನ್ ಹೊರ ಬಂದು ನೋಡಿದರೆ ಹತ್ತಾರು ಬಸ್ಸುಗಳು ನಿಂತಿದ್ದವು. ಯಾವ ಬಸ್ಸೆಂದು ಗೊತ್ತಾಗಲಿಲ್ಲ.
ಇಲ್ಲಿ ಮೊದಲೇ ಭಾಷೆ ಪ್ರಾಬ್ಲಮ್ ಅಲ್ವಾ, ನಮಗೆ ಅವರ ಭಾಷೆ ಬರಲ್ಲ, ನಮ್ದು ಅವರಿಗೆ ಬರಲ್ಲ.
ಗಣಪತಿ ಒಬ್ಬ ಡ್ರೈವರ್ ಹತ್ತಿರ 'ಪೀಸಾ?' ಅಂತ ಕೇಳಿದ್ರು.
ಅವನು 'ತಿನ್ನೋದಾ?' ಅಂತ ಸನ್ನೆ ಮಾಡಿ ಕೇಳ್ದ.
'ಅಯ್ಯೋ ಇದೊಳ್ಳೆ ಪೀಕಲಾಟಕ್ಕೆ ಬಂತಲ್ಲ' ಅಂದು ಮನಸ್ಸಲ್ಲೇ ಬೈಕೊಂಡು, ಇವರು ಕೈ ಓರೆ ಮಾಡಿ ವಾಲಿಸಿ ತೋರಿಸಿದಾಗ ಇನ್ನೊದು ಬಸ್ಸಿನ ಕಡೆ ಕೈ ತೋರಿಸಿದ.
ಅಲ್ಲಿಗೆ ಓಡಿಕೊಂಡು ಹೋದರೆ ಬಸ್ಸಿನ ಮುಂದೆ ಹನುಮಂತನ ಬಾಲದಷ್ಟು ಉದ್ದದ ಕ್ಯೂ.
ಅಲ್ಲಿ ಕಾಯುತ್ತಿರುವಾಗ ಹಿಂದಿನಿಂದ ಒಂದು ಧ್ವನಿ,"ನಮಸ್ತೇ", ಅಪ್ಪಟ ಇಟಾಲಿಯನ್ accent ನಲ್ಲಿ.
ತಿರುಗಿ ನೋಡಿದರೆ ಒಬ್ಬ ಇಟಾಲಿಯನ್ ಅಜ್ಜ, 'ನೀವು ಇಂಡಿಯನ್ಸಾ?' ಅಂತ ವಿಚಾರಿಸಿಕೊಂಡು ಮಾತನಾಡಲು ಶುರುವಿಟ್ಟರು. ತಾನು ಮುಂಬೈ,ಬೆಂಗಳೂರು ಎಲ್ಲ ನೋಡಿದ್ದೀನೆಂದೂ ಇನ್ನೊಂದು ಸ್ವಲ್ಪ ದಿನದಲ್ಲಿ ಮತ್ತೊಮ್ಮೆ ಇಂಡಿಯಾಕ್ಕೆ ಹೋಗುತ್ತೀನೆ೦ದೆಲ್ಲ ಹೇಳಿದಾಗ ನಮಗೇನೋ ಒಂಥರಾ ಥರ ಖುಷಿ!!
ಅಷ್ಟರಲ್ಲಿ ಕ್ಯೂ ಕರಗುತ್ತಾ ಬಂದಾಗ ಅಜ್ಜನಿಗೆ ಬೈ ಹೇಳಿ ಬಸ್ಸು ಹತ್ತಿದೆವು.
ಕಾಲಿಡಲೂ ಜಾಗವಿರದಷ್ಟು ರಶ್ಶಿದ್ದ ಬಸ್ಸು ನಮ್ಮ BMTC ಬಸ್ಸನ್ನು ನೆನಪಿಸುತ್ತಿತ್ತು. ಬಸ್ಸಿನಿಂದ ಇಳಿದಾಗ ಕಂಡಿದ್ದು ಈ ಐತಿಹಾಸಿಕ ಗೋಪುರ!!ಸುತ್ತ ಮುತ್ತೆಲ್ಲಾ ಪ್ರವಾಸಿಗರ ದಂಡು. ಕೆಲವರು ಗೋಪುರವನ್ನು ಇನ್ನೂ ದೂಡುತ್ತಿದ್ದು, ಸಂಜೆಯೊಳಗೆ ಪೂರ್ತಿ ಬೀಳಿಸುವ ಪಣ ತೊಟ್ಟಂತೆ ಕಂಡರೆ, ಇನ್ನೂ ಕೆಲವರು ವಾಲುತ್ತಿದ್ದ ಗೋಪುರ ವನ್ನು ನೆಟ್ಟಗೆ ನಿಲ್ಲಿಸಿಯೇ ಸಿದ್ಧ ಎಂಬಂತ ಪೋಸ್ ಗಳನ್ನು ಕೊಡುತ್ತಿದ್ದರು,ಫೋಟೋಕ್ಕೆ!!
ನಾನು ಕ್ಯಾಮೆರಾ ತೊಗೊಂಡು ನನ್ನ photographic skills ಪರೀಕ್ಷಿಸಿಯೇ ಬಿಡುವ ಅಂತ ಹೋದೆ.
ಎಷ್ಟೇ ಫೋಟೋ ತೆಗೆದರೂ ಗೋಪುರ ನೆಟ್ಟಗೆ, ಅಕ್ಕ ಪಕ್ಕದ ಕಟ್ಟಡಗಳೆಲ್ಲ ವಾಲುತ್ತಿರುಂತೆ ಬಂದುಬಿಡುತ್ತಿದ್ದವು!
ಬೇಡಪ್ಪ ಇದರ ಸಹವಾಸ ಅಂತ ಪಾಪದವಳಂತೆ ಕ್ಯಾಮೆರಾ ವನ್ನು ಗಣಪತಿಯ ಕೈಗೆ ವರ್ಗಾಯಿಸಿದೆ.
ಅವರ ಕೈನಲ್ಲೂ ಇನ್ನೇನು ನಾಲ್ಕು ಡಿಗ್ರಿ ವಾಲಿಯೇ ಬಿಡುತ್ತಿದ್ದ ಕ್ಯಾಮೆರಾವನ್ನು ನೆಟ್ಟಗೆ ನಿಲ್ಲಿಸಿ ಅಂತೂ ಇಂತೂ ವಾಲುತ್ತಿರುವ ಗೋಪುರವನ್ನು ಸೆರೆಹಿಡಿಸಿದೆ.
ಈ ತೊಂದರೆ ಅಲ್ಲಿ ಎಲ್ಲರಿಗೂ ಸಾಮಾನ್ಯವಾಗಿತ್ತು ಅಂತ ಆಮೇಲೆ ಗೊತ್ತಾಯಿತು!
ಬೇಕಾದಷ್ಟು ಫೋಟೋ ತೆಗೆದಾದ ಮೇಲೆ, ಆಗಷ್ಟೆ ಮದುವೆಯಾದ ಜೋಡಿಯೊಂದು ಗೋಪುರದ ಎದುರಿನಲ್ಲಿ ಬರುತ್ತಿದ್ದದ್ದು ಕಣ್ಣಿಗೆ ಬಿತ್ತು.
ಮದುಮಗಳ ಬಿಳಿ ದಿರಿಸಿನ ಫೋಟೋ ತೆಗೆಯುವ ಆಸೆಯಿಂದ ಅವಳ ಹಿಂದೆ ಓಡಿದೆ. ಅವಳ ಡ್ರೆಸ್ಸು ಅದಾಗಲೇ, ಅರ್ಧ ರಸ್ತೆಯನ್ನು ಸ್ವಚ್ಛಗೊಳಿಸಿಬಿಟ್ಟಿತ್ತು.
'ಅಯ್ಯೋ, ಅಂತ ಬಿಳಿ ಡ್ರೆಸ್ಸು ಕೆಂಪಗೆ ಆಗ್ತಾ ಇದೆಯಲ್ಲ' ನಾವಿಬ್ಬರು ಹೆಂಗಸರು ಲೊಚಗುಟಿಕೊಂಡೆವು.
ಪಕ್ಕದಲ್ಲಿದ್ದ ಚರ್ಚ್, museum ಎಲ್ಲ ಬಂದಾಗಿದ್ದರಿಂದ ಒಳಗೆ ಹೋಗಲಾಗಲಿಲ್ಲ.
ಊಟ ಮುಗಿಸಿ ಟ್ರೈನ್ ಹತ್ತಿದೆವು.ಬೆಳಿಗ್ಗೆಯ ಪ್ರಯಾಣದಲ್ಲಿ dumb charades ಆಡುತ್ತ ಗಲಾಟೆ ಮಾಡಿಕೊಂಡು ಹೋದ ನಾವು ವಾಪಸಾಗುವಾಗ sustified ಆಗಿ ನಿದ್ರಾದೇವಿ ಗೆ ಶರಣಾಗಿಬಿಟ್ಟೆವು.
ವಾಪಸ್ ಜೀನೋವ ತಲುಪುವಾಗ ರಾತ್ರಿ ೮ ಘಂಟೆ.
ಅಂತೂ ಒಂದು ಖುಷಿ ಖುಷಿ ಪ್ರವಾಸ ಮುಗಿಸಿದ್ದೆವು.

Wednesday, February 18, 2009

ದೌಮೊ ದಿ ಮಿಲಾನೊ

ದೌಮೊ ದಿ ಮಿಲಾನೊ
ಹೀಗ೦ದ್ರೆ ಮಿಲಾನೊ ದ ಇಗರ್ಜಿ ಅ೦ತ ಅರ್ಥ.

ಇಟಲಿಗೆ ಬ೦ದ ಮೇಲೆ ನನ್ನ ಮೊದಲ ಭೇಟಿ ಇಗರ್ಜಿಗೆ. ಏನಪ್ಪಾ, ಇವಳೇನು ಮತಾ೦ತರ ಮಾಡ್ಕೊ೦ಡ್ಳಾ ಅ೦ತೆಲ್ಲಾ ಸ೦ಶಯ ಪಟ್ಕೋಬೇಡಿ.
ನಾನಿರುವ ಜಿನೋವಾದಿ೦ದ ಮಿಲಾನ್ ಹತ್ರ. ಅದಕ್ಕೆ ಅಲ್ಲಿಗೆ ಮೊದಲ ಭೇಟಿ. ತು೦ಬಾ ಚಳಿಯಿದ್ದರೂ ಇಲ್ಲಿಗೆ ಬ೦ದ ಹೊಸತಾದ್ದರಿ೦ದ ಹೋಗಿ ಬರುವ ಉತ್ಸಾಹ ಅತಿಯಾಗಿತ್ತು.

ಅಲ್ಲಿನ ಚಳಿಗೆ ಗಡಗಡ ನಡುಗುತ್ತಾ ಯಾಕಾದ್ರೂ ಬ೦ದ್ನಪ್ಪಾ ಅ೦ತ ಯೋಚಿಸುತ್ತಿದ್ದೆ. ಆದರೆ ಆ ದೌಮೊ ನ ಕ೦ಡು ಒಳಗೆ ಹೋದ ಕೂಡಲೇ ಪಶ್ಚಾತ್ತಾಪವೆಲ್ಲಾ ಎಲ್ಲಿ ಹಾರಿಹೋಯಿತೊ ಗೊತ್ತಾಗಲಿಲ್ಲ.

ದೌಮೊ ಜಗತ್ತಿನ ಅತಿದೊಡ್ಡ ಗೊಥಿಕ್ ಶೈಲಿಯ ಚರ್ಚ್ ಎ೦ಬುದಾಗಿಯೂ ಮತ್ತು ೨ನೇ ದೊಡ್ಡ ಕೆಥೊಲಿಕ್ ಕೆಥೆಡ್ರಲ್ ಎ೦ಬುದಾಗಿಯೂ ಪ್ರಸಿದ್ಧವಾಗಿದೆ.
ಇದರ ಉದ್ದ ೧೫೭ ಮೀಟರ್ಸ್ ಮತ್ತು ೪೦೦೦೦ ಜನರು ಹಿಡಿಸಬಲ್ಲಷ್ಟು ದೊಡ್ಡದಾಗಿದೆ.
ಇದೇನು ಕೆಲವೇ ವರ್ಷಗಳಲ್ಲಿ ಕಟ್ಟಿ ನಿಲ್ಲಿಸಿದ್ದಲ್ಲ. ಶತಮಾನಗಳಿ೦ದ ಒ೦ದಲ್ಲಾ ಒ೦ದು ತೊ೦ದರೆಗೊಳಪಟ್ಟ ಇದರ ನಿರ್ಮಾಣ ಕಾರ್ಯ ಸ್ವಲ್ಪ ಮಟ್ಟಿಗೆ ಮುಗಿದಿದ್ದು ೧೮೮೦ ಯಲ್ಲ೦ತೆ. ಕಟ್ಟಡ ಕಾರ್ಯ ಅರ೦ಭಗೊ೦ಡಿದ್ದು ೧೦೭೫ ನಲ್ಲಿ.
ಈಗಲೂ ಕೆಲವು ಕಲ್ಲುಗಳು ಶಿಲ್ಪಗಳಾಗಲು ಕಾದು ನಿ೦ತಿವೆ ಅಲ್ಲಿ.

ಕೆಲವೊ೦ದು ಚಿತ್ರಗಳು ಇಲ್ಲಿ ನಿಮಗಾಗಿ. ಅತಿ ಸು೦ದರವಾದ ಒಳಾ೦ಗಣವಿದೆ ಇಲ್ಲಿ, ಮತ್ತು ಹೊರಗೋಡೆಗಳ ಮೇಲಿರುವ ಚಿತ್ರಗಳು ಹಾಗೂ ಕಿಟಕಿಗಳು ಅ೦ದವಾಗಿವೆ.

ಗೊಥಿಕ್ ಶೈಲಿಯ ಗೋಪುರ ವಿದ್ಯುದ್ದೀಪಗಳ ಅಲ೦ಕಾರದಲ್ಲಿ ರಾತ್ರಿ ನೋಡಲು ತು೦ಬಾ
ಚೆನ್ನಾಗಿರುತ್ತ೦ತೆ.
.