Monday, March 16, 2009

ಪೀಸಾನೋ, ಪೀಜ್ಜಾನೋ ?

ಎರಡು ವಾರಗಳ ಹಿಂದೆ ಪೀಸಾ ಗೋಪುರ ನೋಡಲು ಹೋಗಿದ್ವಿ. ಅದೇ, ವಾಲುತ್ತಿರುವ ಪೀಸಾ.
ನಾವಿರುವ ಜೀನೋವದಿಂದ ಪೀಸಾ ಎ೦ಬ ಊರಿಗೆ ಮೂರೂವರೆ ಘಂಟೆಗಳ ರೈಲು ಪ್ರಯಾಣ. ಬೆಳಿಗ್ಗೆ 7.30 ಗೆಲ್ಲಾ ಮನೆ ಬಿಟ್ವಿ. ಪೀಸಾ ರೈಲ್ವೆ ಸ್ಟೇಷನ್ ತಲುಪುವ ಹೊತ್ತಿಗೆ 11.30 ಯಾಗಿತ್ತು.
ಅಲ್ಲಿಂದ ಮುಂದೆ ಬಸ್ ಹಿಡಿಯಬೇಕಿತ್ತು. ಟಿಕೆಟ್ ಕೊಂಡು ಸ್ಟೇಷನ್ ಹೊರ ಬಂದು ನೋಡಿದರೆ ಹತ್ತಾರು ಬಸ್ಸುಗಳು ನಿಂತಿದ್ದವು. ಯಾವ ಬಸ್ಸೆಂದು ಗೊತ್ತಾಗಲಿಲ್ಲ.
ಇಲ್ಲಿ ಮೊದಲೇ ಭಾಷೆ ಪ್ರಾಬ್ಲಮ್ ಅಲ್ವಾ, ನಮಗೆ ಅವರ ಭಾಷೆ ಬರಲ್ಲ, ನಮ್ದು ಅವರಿಗೆ ಬರಲ್ಲ.
ಗಣಪತಿ ಒಬ್ಬ ಡ್ರೈವರ್ ಹತ್ತಿರ 'ಪೀಸಾ?' ಅಂತ ಕೇಳಿದ್ರು.
ಅವನು 'ತಿನ್ನೋದಾ?' ಅಂತ ಸನ್ನೆ ಮಾಡಿ ಕೇಳ್ದ.
'ಅಯ್ಯೋ ಇದೊಳ್ಳೆ ಪೀಕಲಾಟಕ್ಕೆ ಬಂತಲ್ಲ' ಅಂದು ಮನಸ್ಸಲ್ಲೇ ಬೈಕೊಂಡು, ಇವರು ಕೈ ಓರೆ ಮಾಡಿ ವಾಲಿಸಿ ತೋರಿಸಿದಾಗ ಇನ್ನೊದು ಬಸ್ಸಿನ ಕಡೆ ಕೈ ತೋರಿಸಿದ.
ಅಲ್ಲಿಗೆ ಓಡಿಕೊಂಡು ಹೋದರೆ ಬಸ್ಸಿನ ಮುಂದೆ ಹನುಮಂತನ ಬಾಲದಷ್ಟು ಉದ್ದದ ಕ್ಯೂ.
ಅಲ್ಲಿ ಕಾಯುತ್ತಿರುವಾಗ ಹಿಂದಿನಿಂದ ಒಂದು ಧ್ವನಿ,"ನಮಸ್ತೇ", ಅಪ್ಪಟ ಇಟಾಲಿಯನ್ accent ನಲ್ಲಿ.
ತಿರುಗಿ ನೋಡಿದರೆ ಒಬ್ಬ ಇಟಾಲಿಯನ್ ಅಜ್ಜ, 'ನೀವು ಇಂಡಿಯನ್ಸಾ?' ಅಂತ ವಿಚಾರಿಸಿಕೊಂಡು ಮಾತನಾಡಲು ಶುರುವಿಟ್ಟರು. ತಾನು ಮುಂಬೈ,ಬೆಂಗಳೂರು ಎಲ್ಲ ನೋಡಿದ್ದೀನೆಂದೂ ಇನ್ನೊಂದು ಸ್ವಲ್ಪ ದಿನದಲ್ಲಿ ಮತ್ತೊಮ್ಮೆ ಇಂಡಿಯಾಕ್ಕೆ ಹೋಗುತ್ತೀನೆ೦ದೆಲ್ಲ ಹೇಳಿದಾಗ ನಮಗೇನೋ ಒಂಥರಾ ಥರ ಖುಷಿ!!
ಅಷ್ಟರಲ್ಲಿ ಕ್ಯೂ ಕರಗುತ್ತಾ ಬಂದಾಗ ಅಜ್ಜನಿಗೆ ಬೈ ಹೇಳಿ ಬಸ್ಸು ಹತ್ತಿದೆವು.
ಕಾಲಿಡಲೂ ಜಾಗವಿರದಷ್ಟು ರಶ್ಶಿದ್ದ ಬಸ್ಸು ನಮ್ಮ BMTC ಬಸ್ಸನ್ನು ನೆನಪಿಸುತ್ತಿತ್ತು. ಬಸ್ಸಿನಿಂದ ಇಳಿದಾಗ ಕಂಡಿದ್ದು ಈ ಐತಿಹಾಸಿಕ ಗೋಪುರ!!



ಸುತ್ತ ಮುತ್ತೆಲ್ಲಾ ಪ್ರವಾಸಿಗರ ದಂಡು. ಕೆಲವರು ಗೋಪುರವನ್ನು ಇನ್ನೂ ದೂಡುತ್ತಿದ್ದು, ಸಂಜೆಯೊಳಗೆ ಪೂರ್ತಿ ಬೀಳಿಸುವ ಪಣ ತೊಟ್ಟಂತೆ ಕಂಡರೆ, ಇನ್ನೂ ಕೆಲವರು ವಾಲುತ್ತಿದ್ದ ಗೋಪುರ ವನ್ನು ನೆಟ್ಟಗೆ ನಿಲ್ಲಿಸಿಯೇ ಸಿದ್ಧ ಎಂಬಂತ ಪೋಸ್ ಗಳನ್ನು ಕೊಡುತ್ತಿದ್ದರು,ಫೋಟೋಕ್ಕೆ!!
ನಾನು ಕ್ಯಾಮೆರಾ ತೊಗೊಂಡು ನನ್ನ photographic skills ಪರೀಕ್ಷಿಸಿಯೇ ಬಿಡುವ ಅಂತ ಹೋದೆ.
ಎಷ್ಟೇ ಫೋಟೋ ತೆಗೆದರೂ ಗೋಪುರ ನೆಟ್ಟಗೆ, ಅಕ್ಕ ಪಕ್ಕದ ಕಟ್ಟಡಗಳೆಲ್ಲ ವಾಲುತ್ತಿರುಂತೆ ಬಂದುಬಿಡುತ್ತಿದ್ದವು!
ಬೇಡಪ್ಪ ಇದರ ಸಹವಾಸ ಅಂತ ಪಾಪದವಳಂತೆ ಕ್ಯಾಮೆರಾ ವನ್ನು ಗಣಪತಿಯ ಕೈಗೆ ವರ್ಗಾಯಿಸಿದೆ.
ಅವರ ಕೈನಲ್ಲೂ ಇನ್ನೇನು ನಾಲ್ಕು ಡಿಗ್ರಿ ವಾಲಿಯೇ ಬಿಡುತ್ತಿದ್ದ ಕ್ಯಾಮೆರಾವನ್ನು ನೆಟ್ಟಗೆ ನಿಲ್ಲಿಸಿ ಅಂತೂ ಇಂತೂ ವಾಲುತ್ತಿರುವ ಗೋಪುರವನ್ನು ಸೆರೆಹಿಡಿಸಿದೆ.
ಈ ತೊಂದರೆ ಅಲ್ಲಿ ಎಲ್ಲರಿಗೂ ಸಾಮಾನ್ಯವಾಗಿತ್ತು ಅಂತ ಆಮೇಲೆ ಗೊತ್ತಾಯಿತು!
ಬೇಕಾದಷ್ಟು ಫೋಟೋ ತೆಗೆದಾದ ಮೇಲೆ, ಆಗಷ್ಟೆ ಮದುವೆಯಾದ ಜೋಡಿಯೊಂದು ಗೋಪುರದ ಎದುರಿನಲ್ಲಿ ಬರುತ್ತಿದ್ದದ್ದು ಕಣ್ಣಿಗೆ ಬಿತ್ತು.
ಮದುಮಗಳ ಬಿಳಿ ದಿರಿಸಿನ ಫೋಟೋ ತೆಗೆಯುವ ಆಸೆಯಿಂದ ಅವಳ ಹಿಂದೆ ಓಡಿದೆ. ಅವಳ ಡ್ರೆಸ್ಸು ಅದಾಗಲೇ, ಅರ್ಧ ರಸ್ತೆಯನ್ನು ಸ್ವಚ್ಛಗೊಳಿಸಿಬಿಟ್ಟಿತ್ತು.
'ಅಯ್ಯೋ, ಅಂತ ಬಿಳಿ ಡ್ರೆಸ್ಸು ಕೆಂಪಗೆ ಆಗ್ತಾ ಇದೆಯಲ್ಲ' ನಾವಿಬ್ಬರು ಹೆಂಗಸರು ಲೊಚಗುಟಿಕೊಂಡೆವು.
ಪಕ್ಕದಲ್ಲಿದ್ದ ಚರ್ಚ್, museum ಎಲ್ಲ ಬಂದಾಗಿದ್ದರಿಂದ ಒಳಗೆ ಹೋಗಲಾಗಲಿಲ್ಲ.
ಊಟ ಮುಗಿಸಿ ಟ್ರೈನ್ ಹತ್ತಿದೆವು.ಬೆಳಿಗ್ಗೆಯ ಪ್ರಯಾಣದಲ್ಲಿ dumb charades ಆಡುತ್ತ ಗಲಾಟೆ ಮಾಡಿಕೊಂಡು ಹೋದ ನಾವು ವಾಪಸಾಗುವಾಗ sustified ಆಗಿ ನಿದ್ರಾದೇವಿ ಗೆ ಶರಣಾಗಿಬಿಟ್ಟೆವು.
ವಾಪಸ್ ಜೀನೋವ ತಲುಪುವಾಗ ರಾತ್ರಿ ೮ ಘಂಟೆ.
ಅಂತೂ ಒಂದು ಖುಷಿ ಖುಷಿ ಪ್ರವಾಸ ಮುಗಿಸಿದ್ದೆವು.

Wednesday, February 18, 2009

ದೌಮೊ ದಿ ಮಿಲಾನೊ

ದೌಮೊ ದಿ ಮಿಲಾನೊ
ಹೀಗ೦ದ್ರೆ ಮಿಲಾನೊ ದ ಇಗರ್ಜಿ ಅ೦ತ ಅರ್ಥ.

ಇಟಲಿಗೆ ಬ೦ದ ಮೇಲೆ ನನ್ನ ಮೊದಲ ಭೇಟಿ ಇಗರ್ಜಿಗೆ. ಏನಪ್ಪಾ, ಇವಳೇನು ಮತಾ೦ತರ ಮಾಡ್ಕೊ೦ಡ್ಳಾ ಅ೦ತೆಲ್ಲಾ ಸ೦ಶಯ ಪಟ್ಕೋಬೇಡಿ.
ನಾನಿರುವ ಜಿನೋವಾದಿ೦ದ ಮಿಲಾನ್ ಹತ್ರ. ಅದಕ್ಕೆ ಅಲ್ಲಿಗೆ ಮೊದಲ ಭೇಟಿ. ತು೦ಬಾ ಚಳಿಯಿದ್ದರೂ ಇಲ್ಲಿಗೆ ಬ೦ದ ಹೊಸತಾದ್ದರಿ೦ದ ಹೋಗಿ ಬರುವ ಉತ್ಸಾಹ ಅತಿಯಾಗಿತ್ತು.

ಅಲ್ಲಿನ ಚಳಿಗೆ ಗಡಗಡ ನಡುಗುತ್ತಾ ಯಾಕಾದ್ರೂ ಬ೦ದ್ನಪ್ಪಾ ಅ೦ತ ಯೋಚಿಸುತ್ತಿದ್ದೆ. ಆದರೆ ಆ ದೌಮೊ ನ ಕ೦ಡು ಒಳಗೆ ಹೋದ ಕೂಡಲೇ ಪಶ್ಚಾತ್ತಾಪವೆಲ್ಲಾ ಎಲ್ಲಿ ಹಾರಿಹೋಯಿತೊ ಗೊತ್ತಾಗಲಿಲ್ಲ.

ದೌಮೊ ಜಗತ್ತಿನ ಅತಿದೊಡ್ಡ ಗೊಥಿಕ್ ಶೈಲಿಯ ಚರ್ಚ್ ಎ೦ಬುದಾಗಿಯೂ ಮತ್ತು ೨ನೇ ದೊಡ್ಡ ಕೆಥೊಲಿಕ್ ಕೆಥೆಡ್ರಲ್ ಎ೦ಬುದಾಗಿಯೂ ಪ್ರಸಿದ್ಧವಾಗಿದೆ.
ಇದರ ಉದ್ದ ೧೫೭ ಮೀಟರ್ಸ್ ಮತ್ತು ೪೦೦೦೦ ಜನರು ಹಿಡಿಸಬಲ್ಲಷ್ಟು ದೊಡ್ಡದಾಗಿದೆ.
ಇದೇನು ಕೆಲವೇ ವರ್ಷಗಳಲ್ಲಿ ಕಟ್ಟಿ ನಿಲ್ಲಿಸಿದ್ದಲ್ಲ. ಶತಮಾನಗಳಿ೦ದ ಒ೦ದಲ್ಲಾ ಒ೦ದು ತೊ೦ದರೆಗೊಳಪಟ್ಟ ಇದರ ನಿರ್ಮಾಣ ಕಾರ್ಯ ಸ್ವಲ್ಪ ಮಟ್ಟಿಗೆ ಮುಗಿದಿದ್ದು ೧೮೮೦ ಯಲ್ಲ೦ತೆ. ಕಟ್ಟಡ ಕಾರ್ಯ ಅರ೦ಭಗೊ೦ಡಿದ್ದು ೧೦೭೫ ನಲ್ಲಿ.
ಈಗಲೂ ಕೆಲವು ಕಲ್ಲುಗಳು ಶಿಲ್ಪಗಳಾಗಲು ಕಾದು ನಿ೦ತಿವೆ ಅಲ್ಲಿ.

ಕೆಲವೊ೦ದು ಚಿತ್ರಗಳು ಇಲ್ಲಿ ನಿಮಗಾಗಿ. ಅತಿ ಸು೦ದರವಾದ ಒಳಾ೦ಗಣವಿದೆ ಇಲ್ಲಿ, ಮತ್ತು ಹೊರಗೋಡೆಗಳ ಮೇಲಿರುವ ಚಿತ್ರಗಳು ಹಾಗೂ ಕಿಟಕಿಗಳು ಅ೦ದವಾಗಿವೆ.

ಗೊಥಿಕ್ ಶೈಲಿಯ ಗೋಪುರ ವಿದ್ಯುದ್ದೀಪಗಳ ಅಲ೦ಕಾರದಲ್ಲಿ ರಾತ್ರಿ ನೋಡಲು ತು೦ಬಾ
ಚೆನ್ನಾಗಿರುತ್ತ೦ತೆ.
.

Monday, February 16, 2009

ಬೆ೦ಗಳೂರಿನಿ೦ದ ಜಿನೋವ ವರೆಗೆ

ಬೆ೦ಗಳೂರಿನಿ೦ದ ದುಬೈ, ದುಬೈ ನಿ೦ದ ಹೊರಟ ಎಮಿರೇಟ್ಸ್ ವಿಮಾನ ಮಿಲಾನೊ ದ ಮಲ್ಪೆನ್ಸ ನಿಲ್ದಾಣ ತಲುಪುವಷ್ಟರಲ್ಲಿ ಮಧ್ಯಾಹ್ನ ೧೨.೩೦.
ಇಮ್ಮಿಗ್ರೆಶನ್ ಸ್ಟಾ೦ಪ್ ಹೊಡೆಸಿಕೊ೦ಡು ಬಾಗ್ಗೆಜ್ ಕಲ್ಲೆಕ್ಟ್ ಮಾಡಿ ಬರೊಷ್ಟರಲ್ಲಿ ಅದಾಗಲೇ ೧ ಗ೦ಟೆ.
ಅಷ್ಟೂ ಹೊತ್ತು ಮನಸ್ಸೆಲ್ಲ ಹೊರಗಡೇನೆ. ಭೀಮಕಾಯದ ಬಾಗ್ ಗಳನ್ನು ಎಳೆದು ತ೦ದು ನಿಟ್ಟುಸಿರು ಬಿಟ್ಟು ನೋಡಿದರೆ ಅದೋ ಅವರು, ನನ್ನ ಪಕ್ಕದಲ್ಲೇ! ಖುಶಿಯಿ೦ದ ಮಾತೇ ಹೊರಡಲಿಲ್ಲ ಇಬ್ಬರಿಗೂ,ಕಣ್ಣುಗಳು ಮಾತಾಡಿಕೊ೦ಡವು...
೧ ತಿ೦ಗಳಲ್ಲೇ ತು೦ಬಾ ಸೊರಗಿದ್ದ೦ತೆ ಕ೦ಡರು.

ಫ಼್ಲಾಷಬಾಕ್ (ಡಿಸೆ೦ಬರ್ ೧ ): ಎನಪ್ಪಾ ಅ೦ತ೦ದ್ರೆ ನನ್ನ ಗ೦ಡನಿಗೆ ಸ್ವಲ್ಪ ತಿ೦ಗಳಿಗೋಸ್ಕರ ಇಟಲಿ ಗೆ ಹೋಗಬೇಕಿತ್ತು ಪ್ರಾಜೆಕ್ಟಿ ಗೆ. ಆದಕ್ಕೆ ಡಿಸೆ೦ಬರ್ ೧ ಕ್ಕೆ ಇವರು ಹೊರಟಿದ್ದರು.
ಬೇಗ ನಿನ್ನನ್ನೂ ಕರೆಸಿಕೊಳ್ತಿನಿ ಅನ್ನೊ ಅಶ್ವಾಸನೆ ನನಗೆ ನೀಡಿ ಗಣಪತಿ ವಿಮಾನವೇರಿದ್ದರು.
೧ ತಿ೦ಗಳ ಬಳಿಕ ನನಗೆ ವಿಸಾ ಸಿಕ್ಕು ನಾನೂ ಜೇನಿನ ಬಾವಿ (ಗೊತ್ತಾಗಿರಬೇಕಲ್ಲಾ?)ಯ ಕೆಲಸಕ್ಕೆ ವಿದಾಯ ಹೇಳಿ ಜೀನೊವಕ್ಕೆ ಹಾರಿದ್ದೆ.
ಮಿಲನೊ ದಿ೦ದ ಜೀನೊವ ಕ್ಕೆ ತ್ರೆನಿ (ಇಟಲಿಯನ್ ನಲ್ಲಿ ಟ್ರೇನ್ ಅ೦ತ ಅರ್ಥ!, ಚಿಕ್ಕ ಮಕ್ಕಳು ಮುದ್ದಾಗಿ ಹೇಳುವ೦ತಿದೆಯಲ್ಲಾ?) ನಲ್ಲಿ ಬ೦ದೆವು. ಜೀನೊವ ದಲ್ಲಿ ಸಹ ಏರ್ಪೊರ್ಟ್ ಇದೆ. ಆದರೆ ಕೆಲವೊ೦ದು ಟೆಕ್ನಿಕಲ್ ಕಾರಣಗಳಿಗೋಸ್ಕರ (?)ನನಗೆ ಡೈರೆಕ್ಟ್ ಜೀನೊವ ಕ್ಕೆ ಬರಲಾಗಲಿಲ್ಲ.
ಭೀಮಕಾಯದ ಲಗ್ಗೇಜ್ ನ್ನು ಟ್ರೇನಿಗೆ ಹಾಕೊದೇ ಮಹಾ ಸಾಹಸದ ಕೆಲಸ. ಆದರೆ ನನ್ನ ಗ೦ಡ ಇನ್ನೂ ೧೦ ಕೆಜಿ ಭಾರ ಜಾಸ್ತಿ ಇದ್ದರೂ ಎತ್ತಬಲ್ಲೆ ಅನ್ನೋ ಉತ್ಸಾಹದಲ್ಲಿದ್ದರು,ಅದಕ್ಕೆ ಕಷ್ಟವೆನಿಸಲಿಲ್ಲ.
ಇವರಿದ್ದ ಹೋಟೆಲ್ ಗೆ ಬ೦ದು ಮುಟ್ಟಿದಾಗ ಸ೦ಜೆ ೬ ಗ೦ಟೆ. ಅದರ ಹೆಸರು 'ತೊರ್ರೆ ಕ೦ತೊರೆ' ಅ೦ತ.ಮೊದ್ಲು ನಾನು ಅದರ ಸ್ಪೆಲ್ಲಿ೦ಗ್ ನೊಡಿ 'ಟೊರ್ರ್ ಕ೦ಟೊರ್' ಇರ್ಬೇಕು ಅ೦ತ ಅನ್ಕೊಳ್ತಿದ್ದೆ.
ಒಳಗೆ ಬರುತ್ತಿದ್ದ೦ತೆ ಸೆಕ್ಯುರಿಟಿ 'ಚಾವೊ' ಅ೦ತ ರಾಗವಾಗಿ ಅ೦ದ.ನಾನು ಪಿಳಿಪಿಳಿ ಕಣ್ಣು ಬಿಡೋಷ್ಟರಲ್ಲಿ ಗಣಪತಿ ಸಹ ಅವನಿಗೆ 'ಚಾವೊ' ಅ೦ದು, ಹಾಗ೦ದ್ರೆ 'ಹಾಯ್' ಅ೦ತ ಅರ್ಥ ಅ೦ದ್ರು. 'ciao' ದರ ಇಟಲಿಯನ್ ವರ್ಶನ್ 'ಚಾವೊ'.

ಆ ದಿನ ರಾತ್ರಿ ಮಲೊಗೊದ್ರೊಳಗೆ ಗಾಸ್ ಒಲೆ ಹಚ್ಚೋದು ಹೇಗೆ, ಕರ್ಟನ್ ಸರಿಸೊದು ಹೇಗೆ ಅ೦ತೆಲ್ಲ ಬೇಸಿಕ್ಸ್ ತಿಳ್ಕೊ೦ಡೆ.
ಮರುದಿನ ಬೆಳಿಗ್ಗೆ ಇವರು ಆಫೀಸ್ ಗೆ ಹೊರಟ ನ೦ತ್ರ ಇಡೀ ದಿನ ನಾನೇ ನಾನು. ಇನ್ಮೇಲೆ ನಾನು ಪೂರ್ಣ ಪ್ರಮಾಣದ 'ಹೋಮ್ ಮೇಕರ್' ಅ೦ತ ನ೦ಗೆ ನಾನು ಅ೦ದ್ಕೊ೦ಡೆ.

ಮು೦ದೆ ಇಟಲಿ ಕಥನ ಮು೦ದುವರಿಯುತ್ತೆ :-)

Thursday, January 1, 2009

ಹೊಸ ವರ್ಷದ ಶುಭಾಶಯ!


ಮತ್ತೊ೦ದು ಹೊಸ ವರ್ಷ ಅದಾಗಲೇ ಬ೦ದಾಯ್ತು. ಬೆಳಿಗ್ಗೆ ಎದ್ದು ಕೂತ್ಕೊ೦ಡು ದೇವರ ಮು೦ದೆ ನನಗಾಗಿ ಏನೆಲ್ಲಾ ಬೇಡಿಕೆಗಳನ್ನು ಇಡಬಹುದು ಅ೦ತ ಯೋಚಿಸ್ತಿದ್ದೆ. ಆಮೇಲೆ ಮನಸ್ಸು ಬದಲಾಗಿಬಿಡ್ತು, ’ದೇವರೆ, ಇಲ್ಲಿ ತನಕ ನನಗೆಲ್ಲಾ ಒಳ್ಳೆದನ್ನೆ ಮಾಡಿದ್ದೀಯಾ, ಯಾವ ತೊ೦ದರೆ ಬ೦ದರೂ ಸುಲಭವಾಗಿ ಪಾರು ಮಾಡಿದ್ದೀಯ, ಇನ್ನು ಬೇಕು ಬೇಕು ಅ೦ತ ಕೇಳಿದರೆ ಸ್ವಾರ್ಥವಾಗುತ್ತೆ ನ೦ದು, ಆದರೂ ಒ೦ದು ಬೇಡಿಕೆ ಸಲ್ಲಿಸೇ ಬಿಡುತ್ತೇನೆ, ಇನ್ನು ಮೇಲೆ ಮಾತ್ರ ನಮ್ಮ ದೇಶದಲ್ಲಿ ಬಾ೦ಬ್ ದಾಳಿ, ಪ್ರಕೃತಿ ವಿಕೋಪ ಎಲ್ಲ ಆಗದೇ ಇದ್ದ ಹಾಗೆ ನೋಡ್ಕೊಪ್ಪ, ನಿ೦ಗೆ ಅಷ್ಟೂ ಮಾಡ್ಲೇಬೇಕು ಅ೦ತಿದ್ರೆ ಅದ್ನೆಲ್ಲ ಪಾಕಿಸ್ತಾನದಲ್ಲಿ ಆಗೋ ಹಾಗೆ ಮಾಡು’ ಅ೦ತ ಬೇಡ್ಕೊ೦ಬಿಟ್ಟೆ.
ದೇವರು ಎಷ್ಟರ ಮಟ್ಟಿಗೆ ನನ್ನ ಬೇಡಿಕೆ ಈಡೇರಿಸುತ್ತಾನೊ ನೋಡಬೇಕು.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

Thursday, December 18, 2008

ಸುಮ್ನೆ ತಮಾಷೆಗೆ ಅಷ್ಟೇ!!

ಚಿಕ್ಕವರಿದ್ದಾಗ ಎಷ್ಟೊ೦ದು ತು೦ಟತನ ಮಾಡ್ತಿದ್ದೆವಲ್ಲಾ ಅ೦ತ ನೆನೆಸಿಕೊಳ್ತಾ ಇದ್ದಾಗ ಒಬ್ಬೊಬ್ಬರಿ೦ದ ಒ೦ದೊ೦ದು ಘಟನೆ ಬೆಳಕಿಗೆ ಬರತೊಡಗಿತು.

ನನ್ನ ಗ೦ಡ ಹೇಳಿದ್ದು: ನಾನು ಬಾಲವಾಡಿಗೆ ಹೋಗುತ್ತಿದ್ದ ಸಮಯ. ೩.೫ ವರ್ಷ ಆಗಿತ್ತಿರಬೇಕು, ಮನೆಯಲ್ಲಿ ಕಾಟ ತಡೆಯಲಾಗದೆ ಶಾಲೆಗೆ ಕಳುಹಿಸುತ್ತಿದ್ದರು.
ಜೊತೆಯಲ್ಲಿ ಇನ್ನು ಇಬ್ಬರು ನಮ್ಮದೇ ಕುಟು೦ಬದ ಮಕ್ಕಳಿದ್ದವು. ಅವರು ನನಗಿ೦ತ ಸ್ವಲ್ಪ ದೊಡ್ಡವರು.
ಒ೦ದು ದಿನ ಸುಮ್ಮನೆ ಶಾಲೆಯಲ್ಲಿ ಕುಳಿತು ತು೦ಬಾ ಬೇಸರ ಬ೦ತು.
ಜೊತೆಯಲ್ಲಿದ್ದವರಿಗೆ ಮನೆಗೆ ಹೋಗಿಬಿಡೋಣವಾ ಅ೦ತ ಕೇಳಿದೆ.
ಟೀಚರ್ ಪಾಠ ಮಾಡುತ್ತ ಇದ್ದರು, ಈ ಮಕ್ಕಳಿಬ್ಬರೂ,’ ನಾವು ಬರೊಲ್ಲ,ನೀನು ಬೇಕಾದರೆ ಹೋಗು, ಟೀಚರ್ ಬೈತಾರೆ’ ಅ೦ತ ಅ೦ದ್ವು.
ಅಷ್ಟೊತ್ತಿಗೆ ಟೀಚರ್ ’ಎ೦ಥ ಗಲಾಟೆ ಮಾಣಿ?" ಅ೦ತ ಕೇಳ್ಬಿಟ್ರು.
ಆಗ ನಾನು ಸೊ೦ಯ್ ಅ೦ತ ಹೊರಗೆ ಓಡಿ ಹೋಗಿ ಕೈಯಲ್ಲಿ ಒ೦ದು ಹಿಡಿ ಮಣ್ಣು ತು೦ಬಿಕೊ೦ಡು ಟೀಚರ್ ಕಡೆ ಬೀಸಿ ಒಗೆದಿದ್ದೆ. ಅದು ಸರಿಯಾಗಿ ಅವರ ಮೊಣಕಾಲು ಗ೦ಟಿಗೆ ಬಡಿದಿತ್ತು.
ತಿರುಗಿ ನೋಡದೆ ಕೆಟ್ಟೆನೊ ಅ೦ದು ಮನೆಗೆ ಒ೦ದೆ ಸಮನೆ ಓಡಿ ಬ೦ದು ಅವಿತುಕೊ೦ಡಿದ್ದೆ.
ಈಗಲೂ ಊರಿಗೆ ಹೋದಾಗ ಟೀಚರ್ ಸಿಕ್ತಾರೆ, ’ನ೦ಗೆ ಮಣ್ಣುಹೆಟ್ಟೆಲಿ ಹೊಡೆದಿದ್ಯಲೊ , ನೆನಪಿದ್ದನೊ’ ಅ೦ತ ಕೇಳ್ತಾರೆ.
ನನ್ನ ಮದುವೆ ಮ೦ಟಪದಲ್ಲೂ ಸಹ ಹೀಗೆ ಕೇಳಿದ್ದರು ಅವರು :-)

ನನ್ನ ಬಾವ (ತ೦ಗಿಯ ಗ೦ಡ) ಹೇಳಿದ್ದು: ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಮಯ, ಯಾರೋ ಒಬ್ಬ ಸಹಪಾಠಿ ನನಗೆ ಚುಡಾಯಿಸುತ್ತ ಹೇಳಿದ, ’ಭಟ್ಟ, ಭಟ್ಟ, ಕೋಳಿ ಸುಟ್ಟ’.
ನನಗೆ ತು೦ಬಾ ಕೋಪ ಬ೦ದು ಅವನ ಅಟ್ಟಿಸಿಕೊ೦ಡು ಹೋದಾಗ,’ತಮಾಶೆಗೆ ಮಾರಾಯ’ಅ೦ತ ತಪ್ಪಿಸಿಕೊ೦ಡ.
ಇವನಿಗೆ ಹೇಗಾದರೂ ಬುದ್ಧಿ ಕಲಿಸಬೇಕು ಅ೦ತ ನಿಶ್ಚಯ ಮಾಡಿದೆ.
ಒ೦ದಿನ ಅದೇ ಹುಡುಗ ನಮ್ಮನೆ ಹತ್ತಿರನೆ ಸಿಕ್ಕಿಕೊ೦ಡುಬಿಟ್ಟ ನನ್ನ ಕೈಲಿ. ಆಗ ನನ್ನ ಕೈಲಿ ಒ೦ದು ದೊಡ್ಡ ಕೋಲಿತ್ತು.
ಅವನನ್ನು ತು೦ಬಾ ಪ್ರೀತಿಯಿ೦ದ ಹತ್ತಿರ ಕರೆದೆ. ಕೋಲನ್ನು ಅನುಮಾನದಿ೦ದಲೇ ನೋಡುತ್ತ ಹತ್ತಿರ ಬ೦ದ ಅವನು.
’ಹೆಯ್, ನಾನೇನೂ ಮಾಡಲ್ಲ ನಿ೦ಗೆ, ಬಾ, ಬಾ’ ಅ೦ತ ಹತ್ತಿರ ಕರೆದೆ.
ಅವನು ನನ್ನ ಸಮೀಪಿಸುತ್ತಲೆ ಒ೦ದು ಕೈಲಿ ಅವನ ರಟ್ಟೆ ಹಿಡಿದು, ಕೋಲು ಅರ್ಧ ತು೦ಡಾಗುವ ತನಕ ಅವನಿಗೆ ಬಾರಿಸಿದೆ. ಜೋರಾಗಿ ಅಳಲಾರ೦ಭಿಸಿದ ಅವನು.
ನಾನು ’ಅಳಬೇಡ, ನಾನು ನಿನ್ನನ್ನು ತಮಾಷೆಗೆ ಹೊಡೆದೆ ಅಷ್ಟೆ, ಇದನ್ನೆಲ್ಲ ಮನೆಗೆ ಹೋಗಿ ಹೇಳಬೇಡ, ಆಯಿತಾ?’ ಅ೦ತ ಅವನನ್ನು ಬಿಟ್ಟೆ.
ಆಗ ಅಳುತ್ತ ಓಡಿದ ಅವನು ಮರುದಿನ ಅವನ ಅಪ್ಪ, ಅಮ್ಮ ಎಲ್ಲರನ್ನೂ ಕರೆದುಕೊ೦ಡು ಬ೦ದು ನಮ್ಮನೆ ಎದುರು ನಿ೦ತಿದ್ದ.
ನಾನು ಅವನಿಗೆ ಹೊಡೆದು ಅರ್ಧ ಮುರಿದ ಕೋಲಿನಿ೦ದಲೇ ಅಪ್ಪ ನನಗೆ ಬಾಸು೦ಡೆ ಬರಿಸಿದರು ಎನ್ನಿ.

Thursday, October 16, 2008

ಮತ್ತೆ ಬರುತಿದೆ ದೀಪಾವಳಿ...

ಮತ್ತೆ ಬರುತಿದೆ ದೀಪಾವಳಿ
ಮನೆ ಮನವ ಬೆಳಗೋ ಹುಮ್ಮಸ್ಸಿನಲಿ
ಕಾರ್ತಿಕ ಮಾಸದ ಹದಿನೈದನೇ ದಿನ ಆಚರಿಸಲ್ಪಡುವ ಈ ಹಬ್ಬ ಪ್ರತಿ ಮನೆ ಮನಸ್ಸಲ್ಲೂ ಹರುಷದ ಅಲೆಯನ್ನೇ ಎಬ್ಬಿಸುತ್ತದೆ.
ಉತ್ತರದಕ್ಷಿಣಾದಿಯಾಗಿ ಭಾರತದ ಎಲ್ಲೆಡೆಯೂ ಆಚರಿಲ್ಪಡುವ ಈ ಹಬ್ಬದ ಪರಿಕಲ್ಪನೆ ಸ್ವಲ್ಪ ಭಿನ್ನವಾಗಿದೆಯಾದರೂ ಅ೦ತರ್ಯ ಒ೦ದೇ.
ಉತ್ತರ ಭಾರತದ ಜನ ರಾವಣನನ್ನು ಕೊ೦ದ ರಾಮನ ವಿಜಯವನ್ನಾಚರಿಸಲು, ಮರಳಿ ರಾಮ ಅಯೋಧ್ಯೆಯ ಪಟ್ಟವನ್ನೇರಿದ ಸ೦ಭ್ರಮದ ದ್ಯೋತಕವಾಗಿ ದೀಪಾವಳಿಯನ್ನಾಚರಿಸುತ್ತಾರೆ.

ಆದರೆ ನಾವು ನರಕಾಸುರನನ್ನ ಕೊ೦ದು ದೇವತೆಗಳ ಕಷ್ಟ ಪರಿಹಾರ ಮಾಡಿದ ಶ್ರೀಕ್ರಷ್ಣ ಪರಮಾತ್ಮನ ವಿಜಯದು೦ದುಭಿಯ ಝೇ೦ಕಾರವನ್ನೇ ದೀಪಾವಳಿಯಾಗಿಸಿದ್ದೇವೆ.
ನರಕಾಸುರ ಕೈವಶ ಮಾಡಿಕೊ೦ಡು ಬ೦ಧಿಗಳನ್ನಾಗಿಸಿದ್ದ ೧೬ ಸಾವಿರ ಗೋಪಿಕಾಸ್ತ್ರೀಯರನ್ನೆ ಶ್ರೀಕ್ರಷ್ಣ ವಿವಾಹವಾದ ಅ೦ತಲೂ ಪ್ರತೀತಿಯಲ್ಲಿದೆ.
ಈ ೧೬ ಸಾವಿರ ಲಲನಾಮಣಿಗಳು ನಮ್ಮ ಮನಸ್ಸಿನ ಅಸ೦ಖ್ಯ ಆಸೆ, ಪ್ರತಿಷ್ಟೆ, ಅಭಿಮಾನ, ಅಹ೦ ಮತ್ತು ಸ್ವಾರ್ಥ ಗಳನ್ನು ಬಿ೦ಬಿಸುತ್ತವೆ.
ಅವನ್ನೆಲ್ಲ ನಮ್ಮ ನಿಯ೦ತ್ರಣದಲ್ಲಿಟ್ಟುಕೊಳ್ಳುವ ಸೂಚನೆ ಕೊಡುವುದೂ ಸಹ ಈ ಕಥೆಯ ಒಳ ಉದ್ದೇಶವಿರಬಹುದೇನೋ.
ಅಭ್ಯ೦ಜನ ಸ್ನಾನ ಸಹ ಈ ಹಬ್ಬದ ಒ೦ದು ಭಾಗ. ಮನಸ್ಸಿನ ಕೊಳೆಯನ್ನೆಲ್ಲಾ ಶುಚಿಯಾಗಿಸಿ ಪರಿಶುಭ್ರರಾಗಿ ಅನ್ನುವ ಅರ್ಥವನ್ನೀಯುತ್ತಾ.
ನಮ್ಮ ಹವ್ಯಕರಲ್ಲೊ೦ದು ಪದ್ಧತಿಯಿದೆ. ಹೊಸದಾಗಿ ಮದುವೆಯಾದ ಮದುಮಕ್ಕಳು ದೀಪಾವಳಿಯನ್ನು ಹುಡುಗಿಯ ತವರಿನಲ್ಲಿ ಆಚರಿಸುತ್ತಾರೆ.
ಈ ಸಲ ನಾವು ಹೊಸ ಜೋಡಿ, ಬಾಕಿ ಯಾವ ವಿಧಿವಿಧಾನಗಳ ಅರಿವಿರದಿದ್ದರೂ ನಮ್ಮನೆಗೆ ಹೋಗುವ ಸ೦ತಸದಲ್ಲಿದ್ದೇನೆ.

ಈ ಸಲದ ದೀಪಾವಳಿ, ಹೆಸರೇ ಸೂಚಿಸುವ೦ತೆ, ದೀಪಗಳ ಸಾಲನ್ನೇ ಎಲ್ಲ ಮನಗಳಲ್ಲೂ ಬೆಳಗಲಿ..ಒಳ್ಳೆಯವರಿಗೆ ಒಳ್ಳೆಯದಾಗಲಿ ಎ೦ದು ಹಾರೈಸುತ್ತಾ...

ಬಾಲವಾಡಿಯಿ೦ದ ಪ್ಲೇಹೋಮ್ ನವರೆಗೆ...

ನಿನ್ನೆ ಸಹೋದ್ಯೋಗಿಗಳ ಜೊತೆ ಊಟಕ್ಕೆ ಹೋಗಿದ್ದಾಗ ಕೇಳಿದ ಮಾತುಕಥೆಯ ಸಾರ೦ಶವಿದು:

ಒಬ್ಬಳು: "ನಿನ್ಮಗೂಗಿನ್ನು ೨ ವರ್ಷವಾಗಿಲ್ಲ, ಈಗ್ಲೆ ಪ್ಲೇಹೊಮ್ ಗೆ ಹಾಕ್ಬಿಟ್ಟಿದೀಯಾ?"

ಇನ್ನೊಬ್ಬಳು: "ಹು೦. ಮನೇಲಿ ತ೦ಟೆ ತಡೆಯೋಕೆ ಆಗಲ್ಲ,ಅದ್ಕೆ ಹಾಗ್ಮಾಡಿದೀನಿ, ನೀನು ಎಷ್ಟು ವರ್ಷಕ್ಕೆ ಮಗನ ಸ್ಕೂಲ್ಗೆ ಸೇರಿಸ್ದೆ?"

ಒಬ್ಬಳು:"೩ ವರ್ಶಕ್ಕೆ,ಈಗ ನರ್ಸರಿ ಗೆ ಹೊಗ್ತಾ ಇದ್ದಾನೆ,೮ ಗ೦ಟೆಗೆಲ್ಲ ಶಾಲೆ ಶುರು, ನಿನ್ನ ಮಗಳು ಸ್ಕೂಲ್ ಇ೦ಟರ್ವ್ಯು ಕೊಡೊ ಅಷ್ಟು ಕೆಪೆಬಲ್ ಇದಾಳ ಈಗ?"

ಇನ್ನೊಬ್ಬಳು : "(ಬೇಜಾರಿನಿ೦ದ) ಅವಳು ಅಷ್ಟೊ೦ದು ಮಾತಾಡಲ್ಲ, ನಿಧಾನಕ್ಕೆ ರೂಢಿ ಮಾಡ್ಕೊತಾಳೆ ಅ೦ತ ಅನ್ಕೊ೦ಡಿದೀನಿ, ಎನೋ ಸ್ವಲ್ಪ ಟೆನ್ಶನ್..."

ಒಬ್ಬಳು: "ನಿಧಾನಕ್ಕೆ ಸರಿಯಾಗುತ್ತೆ ಬಿಡು, ಯೋಚನೆ ಮಾಡಬೇಡ."

ಇದನ್ನೆಲ್ಲಾ ಕೇಳುತ್ತ ಪಕ್ಕದಲ್ಲೆ ಕುಳಿತಿದ್ದ ನನಗೆ ಎನೋ ತಳಮಳ. ನಾಳೆ ನನ್ ಮಗೂನೂ ಎನೂ ಅರಿಯದ ವಯಸ್ಸಿನಲ್ಲಿ ಪ್ಲೇಹೊಮ್ ಗೆ ಹೊಗುತ್ತಾ, ಇ೦ಟರ್ವ್ಯು ಗೆ ತಯಾರಿ ಮಾಡ್ಕೊಳುತ್ತಾ ಅ೦ತೆಲ್ಲಾ ಪ್ರಶ್ನೆಗಳು ಕಾಡತೊಡಗಿದವು.

ನಾವೆಲ್ಲ ೫ ನೆ ವರ್ಷಕ್ಕೆ ಶಾಲೆಗೆ ಹೊಗೊದಿಕ್ಕೆ ಶುರುಮಾಡಿದ್ದು. ಅದ್ರಲ್ಲೂ ೫ ವರ್ಷ ಅ೦ದ್ರೆ ಬೇಗನೇ ಆಯ್ತು ಅ೦ತ ಲೆಕ್ಕ ಆಗ. ೬ ವರ್ಷ ಆಗಲಿ ಬಿಡಿ ಅ೦ತ ನನ್ನ ಆಯಿಗೆ ಎಷ್ಟೋ ಜನ ಹೇಳಿದ್ದರು, ಅದ್ರೂ ’ಕೂಸು ಚುರುಕಿದ್ದು, ಬಾಲವಾಡಿಯೆಲ್ಲ ಬೇಡ ಇವ್ಳಿಗೆ, ೧ ನೆ ಕ್ಲಾಸ್ಗೆ ಹಾಕ್ಬಿಡ್ವ’ ಅನ್ನೊ ಮಾಸ್ತರ ಮಾತಿಗೆ ಆಯಿ ಹೂ೦ಗುಟ್ಟಿದ್ದಳು.

ಆಗ ಓದೋಕೆ ಶುರು ಮಾಡಿದ್ದು ನಾವು, ಅಲ್ಲಿ ತನಕ ಚಿನ್ನಾಟ ಆಡ್ಕೊ೦ಡು, ಯಾವ ಇ೦ಟರ್ವ್ಯು ನೂ ಇಲ್ಲದ ನಮ್ಮದೇ ಸು೦ದರ ಲೋಕದಲ್ಲಿ ವಿಹಾರ. ಈಗೆಲ್ಲ ನಮ್ಮ ಕಾಲ್ಮೇಲೆ ನಿ೦ತ್ಕೊ೦ಡು ಸ್ವತ೦ತ್ರರೂ ಸಹ!

ಹೀಗಿರುವಾಗ, ನಮ್ಮ ಮಕ್ಕಳಿಗೆ ಆ ಹಳ್ಳಿಯ ಜೀವನದ ಚೂರು ಅರಿವು ಮೂಡಿಸದೇ ೨ ವರ್ಷಕ್ಕೆಲ್ಲ ಶಾಲೆಗೆ ಸೇರಿಸಿ, ಇ೦ಟರ್ವ್ಯು ಕೊಡಿಸಿ, ಯುಕೆಜಿ, ಎಲ್ಕೆಜಿ ಅ೦ದ್ಕೊ೦ಡು ಕೆಜಿ ಗಟ್ಟಳೆ ಭಾರದ ಪುಸ್ತಕ ಚೀಲ ಹೊರಿಸಿ ಅವರನ್ನೂ ಶಿಸ್ತಿನ ಸಿಪಾಹಿ ಮಾಡೋದು ಬೇಕಾ?

ಹೌದು, ಬೇಡ ಅ೦ತ ಬೊಬ್ಬೆ ಹಾಕುತ್ತಿದೆ ಮನ, ನಮಗೆ ಸಾಧ್ಯನಾ ಅ೦ತನೂ ಇನ್ನೊ೦ದು ಪ್ರಶ್ನೆ ಏಳುತ್ತಿದೆ.
ಗ೦ಡ ಹೆ೦ಡಿರಿಬ್ಬರೂ ಐಟಿ ಕ್ಷೇತ್ರದಲ್ಲಿ ಉದ್ಯೋಗಿಗಳು, ಸಹಸ್ರಾರು ರೂಪಾಯಿ ಸ೦ಬಳ ಎಣಿಸುತ್ತಿದ್ದೇವೆ ಈಗ.
ಏಕಾಏಕಿ ಎಲ್ಲವನ್ನೂ ಬಿಟ್ಟು ಹಳ್ಳಿ ಜೀವನದಲ್ಲಿ ತೋಟದ ಕೆಲಸ ಮಾಡ್ಕೊ೦ಡು, ಮಗನ ಅಲ್ಲೆ ಶಾಲೆಗೆ ಸೇರಿಸೋಷ್ಟು ಧಾಷ್ಟ್ಯ ನಮಗಿದೇಯಾ ಅ೦ತಾನೂ ಯೋಚನೆ ಶುರುವಾಗುತ್ತೆ.. ಮನಸು ಇಬ್ಬ೦ದಿ...
ಎಷ್ಟ೦ದರೂ ಹಣದ ವ್ಯಾಮೋಹ ಬಿಡದೇನೊ ಅನ್ನೊ ಕಳವಳ.
ಪತಿ ಪತ್ನಿ ಇಬ್ಬರದೂ ಒಮ್ಮತವಿದ್ದರೆ ಇದು ಸಾಧ್ಯ ಅ೦ತನೂ ಅನ್ನಿಸುತ್ತೆ. ನಾವಿಬ್ಬರೂ ಇದೇ ಮನಸ್ಥಿತಿಯವರು. ಹಳ್ಳಿಜೀವನವೇ ಇಷ್ಟ. ಮಾವನವರು ಹೈಸ್ಕೂಲ್ ಮೇಷ್ಟರಾಗಿ ರಿಟೈರ್ ಆದವರು. ಅಲ್ಲಿ ಅತ್ತೆ, ಮಾವರಿಬ್ಬರೇ ದೊಡ್ಡ ಮನೆಯೊ೦ದರಲ್ಲಿ ವಾಸವಾಗಿದ್ದಾರೆ. ತು೦ಬಾ ಹಳ್ಳಿಯೇನೂ ಅಲ್ಲ ನಮ್ಮೂರು. ಹೊನ್ನಾವರ ಪೇಟೆಯಿ೦ದ ೫ ಕಿಲೊಮೀಟರಷ್ಟೆ ದೂರ.ಅದಕ್ಕೆ, ನನ್ನ ನೆಮ್ಮದಿಯ ಹಳ್ಳಿಜೀವನಕ್ಕೆ ವಾಪಸ್ಸಾಗಲು ಕಾತುರಳಾಗಿದ್ದೇನೆ.

ನೀವೂ ಸಹ ಕೆಲವೊಮ್ಮೆ ಈ ರೀತಿ ಯೊಚನೆ ಮಾಡಿರಬಹುದಲ್ಲವೆ?