Monday, March 16, 2009

ಪೀಸಾನೋ, ಪೀಜ್ಜಾನೋ ?

ಎರಡು ವಾರಗಳ ಹಿಂದೆ ಪೀಸಾ ಗೋಪುರ ನೋಡಲು ಹೋಗಿದ್ವಿ. ಅದೇ, ವಾಲುತ್ತಿರುವ ಪೀಸಾ.
ನಾವಿರುವ ಜೀನೋವದಿಂದ ಪೀಸಾ ಎ೦ಬ ಊರಿಗೆ ಮೂರೂವರೆ ಘಂಟೆಗಳ ರೈಲು ಪ್ರಯಾಣ. ಬೆಳಿಗ್ಗೆ 7.30 ಗೆಲ್ಲಾ ಮನೆ ಬಿಟ್ವಿ. ಪೀಸಾ ರೈಲ್ವೆ ಸ್ಟೇಷನ್ ತಲುಪುವ ಹೊತ್ತಿಗೆ 11.30 ಯಾಗಿತ್ತು.
ಅಲ್ಲಿಂದ ಮುಂದೆ ಬಸ್ ಹಿಡಿಯಬೇಕಿತ್ತು. ಟಿಕೆಟ್ ಕೊಂಡು ಸ್ಟೇಷನ್ ಹೊರ ಬಂದು ನೋಡಿದರೆ ಹತ್ತಾರು ಬಸ್ಸುಗಳು ನಿಂತಿದ್ದವು. ಯಾವ ಬಸ್ಸೆಂದು ಗೊತ್ತಾಗಲಿಲ್ಲ.
ಇಲ್ಲಿ ಮೊದಲೇ ಭಾಷೆ ಪ್ರಾಬ್ಲಮ್ ಅಲ್ವಾ, ನಮಗೆ ಅವರ ಭಾಷೆ ಬರಲ್ಲ, ನಮ್ದು ಅವರಿಗೆ ಬರಲ್ಲ.
ಗಣಪತಿ ಒಬ್ಬ ಡ್ರೈವರ್ ಹತ್ತಿರ 'ಪೀಸಾ?' ಅಂತ ಕೇಳಿದ್ರು.
ಅವನು 'ತಿನ್ನೋದಾ?' ಅಂತ ಸನ್ನೆ ಮಾಡಿ ಕೇಳ್ದ.
'ಅಯ್ಯೋ ಇದೊಳ್ಳೆ ಪೀಕಲಾಟಕ್ಕೆ ಬಂತಲ್ಲ' ಅಂದು ಮನಸ್ಸಲ್ಲೇ ಬೈಕೊಂಡು, ಇವರು ಕೈ ಓರೆ ಮಾಡಿ ವಾಲಿಸಿ ತೋರಿಸಿದಾಗ ಇನ್ನೊದು ಬಸ್ಸಿನ ಕಡೆ ಕೈ ತೋರಿಸಿದ.
ಅಲ್ಲಿಗೆ ಓಡಿಕೊಂಡು ಹೋದರೆ ಬಸ್ಸಿನ ಮುಂದೆ ಹನುಮಂತನ ಬಾಲದಷ್ಟು ಉದ್ದದ ಕ್ಯೂ.
ಅಲ್ಲಿ ಕಾಯುತ್ತಿರುವಾಗ ಹಿಂದಿನಿಂದ ಒಂದು ಧ್ವನಿ,"ನಮಸ್ತೇ", ಅಪ್ಪಟ ಇಟಾಲಿಯನ್ accent ನಲ್ಲಿ.
ತಿರುಗಿ ನೋಡಿದರೆ ಒಬ್ಬ ಇಟಾಲಿಯನ್ ಅಜ್ಜ, 'ನೀವು ಇಂಡಿಯನ್ಸಾ?' ಅಂತ ವಿಚಾರಿಸಿಕೊಂಡು ಮಾತನಾಡಲು ಶುರುವಿಟ್ಟರು. ತಾನು ಮುಂಬೈ,ಬೆಂಗಳೂರು ಎಲ್ಲ ನೋಡಿದ್ದೀನೆಂದೂ ಇನ್ನೊಂದು ಸ್ವಲ್ಪ ದಿನದಲ್ಲಿ ಮತ್ತೊಮ್ಮೆ ಇಂಡಿಯಾಕ್ಕೆ ಹೋಗುತ್ತೀನೆ೦ದೆಲ್ಲ ಹೇಳಿದಾಗ ನಮಗೇನೋ ಒಂಥರಾ ಥರ ಖುಷಿ!!
ಅಷ್ಟರಲ್ಲಿ ಕ್ಯೂ ಕರಗುತ್ತಾ ಬಂದಾಗ ಅಜ್ಜನಿಗೆ ಬೈ ಹೇಳಿ ಬಸ್ಸು ಹತ್ತಿದೆವು.
ಕಾಲಿಡಲೂ ಜಾಗವಿರದಷ್ಟು ರಶ್ಶಿದ್ದ ಬಸ್ಸು ನಮ್ಮ BMTC ಬಸ್ಸನ್ನು ನೆನಪಿಸುತ್ತಿತ್ತು. ಬಸ್ಸಿನಿಂದ ಇಳಿದಾಗ ಕಂಡಿದ್ದು ಈ ಐತಿಹಾಸಿಕ ಗೋಪುರ!!



ಸುತ್ತ ಮುತ್ತೆಲ್ಲಾ ಪ್ರವಾಸಿಗರ ದಂಡು. ಕೆಲವರು ಗೋಪುರವನ್ನು ಇನ್ನೂ ದೂಡುತ್ತಿದ್ದು, ಸಂಜೆಯೊಳಗೆ ಪೂರ್ತಿ ಬೀಳಿಸುವ ಪಣ ತೊಟ್ಟಂತೆ ಕಂಡರೆ, ಇನ್ನೂ ಕೆಲವರು ವಾಲುತ್ತಿದ್ದ ಗೋಪುರ ವನ್ನು ನೆಟ್ಟಗೆ ನಿಲ್ಲಿಸಿಯೇ ಸಿದ್ಧ ಎಂಬಂತ ಪೋಸ್ ಗಳನ್ನು ಕೊಡುತ್ತಿದ್ದರು,ಫೋಟೋಕ್ಕೆ!!
ನಾನು ಕ್ಯಾಮೆರಾ ತೊಗೊಂಡು ನನ್ನ photographic skills ಪರೀಕ್ಷಿಸಿಯೇ ಬಿಡುವ ಅಂತ ಹೋದೆ.
ಎಷ್ಟೇ ಫೋಟೋ ತೆಗೆದರೂ ಗೋಪುರ ನೆಟ್ಟಗೆ, ಅಕ್ಕ ಪಕ್ಕದ ಕಟ್ಟಡಗಳೆಲ್ಲ ವಾಲುತ್ತಿರುಂತೆ ಬಂದುಬಿಡುತ್ತಿದ್ದವು!
ಬೇಡಪ್ಪ ಇದರ ಸಹವಾಸ ಅಂತ ಪಾಪದವಳಂತೆ ಕ್ಯಾಮೆರಾ ವನ್ನು ಗಣಪತಿಯ ಕೈಗೆ ವರ್ಗಾಯಿಸಿದೆ.
ಅವರ ಕೈನಲ್ಲೂ ಇನ್ನೇನು ನಾಲ್ಕು ಡಿಗ್ರಿ ವಾಲಿಯೇ ಬಿಡುತ್ತಿದ್ದ ಕ್ಯಾಮೆರಾವನ್ನು ನೆಟ್ಟಗೆ ನಿಲ್ಲಿಸಿ ಅಂತೂ ಇಂತೂ ವಾಲುತ್ತಿರುವ ಗೋಪುರವನ್ನು ಸೆರೆಹಿಡಿಸಿದೆ.
ಈ ತೊಂದರೆ ಅಲ್ಲಿ ಎಲ್ಲರಿಗೂ ಸಾಮಾನ್ಯವಾಗಿತ್ತು ಅಂತ ಆಮೇಲೆ ಗೊತ್ತಾಯಿತು!
ಬೇಕಾದಷ್ಟು ಫೋಟೋ ತೆಗೆದಾದ ಮೇಲೆ, ಆಗಷ್ಟೆ ಮದುವೆಯಾದ ಜೋಡಿಯೊಂದು ಗೋಪುರದ ಎದುರಿನಲ್ಲಿ ಬರುತ್ತಿದ್ದದ್ದು ಕಣ್ಣಿಗೆ ಬಿತ್ತು.
ಮದುಮಗಳ ಬಿಳಿ ದಿರಿಸಿನ ಫೋಟೋ ತೆಗೆಯುವ ಆಸೆಯಿಂದ ಅವಳ ಹಿಂದೆ ಓಡಿದೆ. ಅವಳ ಡ್ರೆಸ್ಸು ಅದಾಗಲೇ, ಅರ್ಧ ರಸ್ತೆಯನ್ನು ಸ್ವಚ್ಛಗೊಳಿಸಿಬಿಟ್ಟಿತ್ತು.
'ಅಯ್ಯೋ, ಅಂತ ಬಿಳಿ ಡ್ರೆಸ್ಸು ಕೆಂಪಗೆ ಆಗ್ತಾ ಇದೆಯಲ್ಲ' ನಾವಿಬ್ಬರು ಹೆಂಗಸರು ಲೊಚಗುಟಿಕೊಂಡೆವು.
ಪಕ್ಕದಲ್ಲಿದ್ದ ಚರ್ಚ್, museum ಎಲ್ಲ ಬಂದಾಗಿದ್ದರಿಂದ ಒಳಗೆ ಹೋಗಲಾಗಲಿಲ್ಲ.
ಊಟ ಮುಗಿಸಿ ಟ್ರೈನ್ ಹತ್ತಿದೆವು.ಬೆಳಿಗ್ಗೆಯ ಪ್ರಯಾಣದಲ್ಲಿ dumb charades ಆಡುತ್ತ ಗಲಾಟೆ ಮಾಡಿಕೊಂಡು ಹೋದ ನಾವು ವಾಪಸಾಗುವಾಗ sustified ಆಗಿ ನಿದ್ರಾದೇವಿ ಗೆ ಶರಣಾಗಿಬಿಟ್ಟೆವು.
ವಾಪಸ್ ಜೀನೋವ ತಲುಪುವಾಗ ರಾತ್ರಿ ೮ ಘಂಟೆ.
ಅಂತೂ ಒಂದು ಖುಷಿ ಖುಷಿ ಪ್ರವಾಸ ಮುಗಿಸಿದ್ದೆವು.

5 comments:

Ittigecement said...

ಗೀತಾರವರೆ...

ಚಂದದ ಪ್ರವಾಸ ಕಥನ..
ಕಣ್ಣಿಗೆ ಕಟ್ಟುವ ಹಾಗೆ ಬಿಂಬಿಸಿದ್ದೀರಿ...
ಫೋಟೊ ಚೆನ್ನಾಗಿ ಬಂದಿದೆ...

ಇನ್ನಷ್ಟು ಬರೆಯಿರಿ..
ಇನ್ನಷ್ಟು ಫೋಟೊ ಹಾಕಿ..

ಅಲ್ಲಿಯ ಕರೇನ್ಸಿ "ಲಿರಾ" ಅಲ್ಲವಾ..?
"ಯುರೋ" ನಾ?

ಅಲ್ಲಿ ರೌಡಿಗಳು ಜಾಸ್ತಿಯಂತೆ ನಿಜವಾ..?

ಗೀತಾ ಗಣಪತಿ said...

ಪ್ರಕಾಶಣ್ಣ,
ತುಂಬಾ ಥ್ಯಾಂಕ್ಸ್ :-)

ಇಲ್ಲಿ ಕರೆನ್ಸಿ ಯುರೋ. ರೌಡಿಗಳ ಬಗ್ಗೆ ಅನುಭವ ಇನ್ನೂ ಆಯ್ದಿಲ್ಲೆ :-)
ಮಾಫಿಯ ಎಲ್ಲ ಜಾಸ್ತಿ ಹೇಳಿ ಹೇಳ್ತ. ಗೊತ್ತಿಲ್ಲೆ ಹೌದೋ ಅಲ್ದೋ ಹೇಳಿ.

SouMeow said...

Hi Geetha, chennagide nimma pravasada varnane... i like ur writing style, the humourous tinge in it.. waiting for the next one :)

ಸುಧೇಶ್ ಶೆಟ್ಟಿ said...

ಗೀತಾ ಅವರೇ...

ತು೦ಬಾ ಚೆನ್ನಾಗಿ ಮೂಡಿಬರುತ್ತಿದೆ ಇಟಲಿ ಪ್ರವಾಸ ಕಥನ... ಪೀಸಾ ಗೋಪುರವನ್ನೊಮ್ಮೆ ನೋಡಬೇಕೆ೦ಬ ಆಸೆ ನನಗೆ...

ಹಾಗೆ ರೋಮ್ ನಗರಕ್ಕೆ ಹೋಗುವ ಪ್ಲಾನ್ ಹಾಕಿದ್ದೀರೇನೋ... ತು೦ಬಾ ಸು೦ದರ ನಗರವ೦ತೆ. ಅಲ್ಲಿಗೆ ಹೋದರೆ ತು೦ಬಾ ಫೋಟೋಗಳನ್ನು ತೆಗೆಯಿರಿ ಮತ್ತು ನಮ್ಮ ಜೊತೆ ಹ೦ಚಿಕೊಳ್ಳಿ...

Ranjana H said...

ತಮ್ಮ ಪ್ರವಾಸಿ ಅನುಭವ ಚೆನ್ನಾಗಿದೆ. ಬೇರೆ ದೇಶದಲ್ಲಿ ನಮ್ಮವರನ್ನು ನೋಡಿದರೆ ಯಾವ ರೀತಿಯ ಅನುಭವ ಆಗುತ್ತದೆ ಅನ್ನೋದು ಅನುಭವಿಸಿದವರಿಗೆ ಗೊತ್ತು ಅಲ್ವೇ?

ಸಮಯವಿದ್ದಾಗ ನನ್ನ ಪುಟ್ಟ ಅಂಗಳಕ್ಕೂ ಬಂದು ಹೋಗಿ
ರಂಜನಾ
ranjanahegde.wordpress.com
ranjanah.blogspot.com
http://www.flickr.com/photos/ranjanah/